ನೂತನ ಸರಕಾರ ರಚನೆಯಲ್ಲಿ ನಾವು ನಿರ್ಣಾಯಕ: ಶಾಸಕ ವರ್ತೂರು ಪ್ರಕಾಶ್

Update: 2017-12-31 14:01 GMT

ಬಾಗಲಕೋಟೆ, ಡಿ. 31: ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಮಹತ್ವದ ಪಾತ್ರ ವಹಿಸಲಿದ್ದು, ನೂತನ ಸರಕಾರ ಸ್ಥಾಪನೆಯಲ್ಲಿ ನಾವು ನಿರ್ಣಾಯಕ ಎಂದು ‘ನಮ್ಮ ಕಾಂಗ್ರೆಸ್ ಪಕ್ಷ’ದ ಮುಖಂಡ ಹಾಗೂ ಶಾಸಕ ವರ್ತೂರು ಪ್ರಕಾಶ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಕೂಡಲಸಂಗಮದಲ್ಲಿ ಏರ್ಪಡಿಸಿದ್ದ ನಮ್ಮ ಕಾಂಗ್ರೆಸ್ ಪಕ್ಷದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ಕೆಳ ಹಂತದ ನಾಯಕರನ್ನು ಕಡೆಗಣಿಸಿದ್ದಾರೆ. ಅವರ ಜತೆಗಿದ್ದು ನೋವು ಅನುಭವಿಸಿ ಹೊಸ ಪಕ್ಷ ಸ್ಥಾಪಿಸಿದ್ದೇನೆ" ಎಂದರು.

"ರಾಜ್ಯದ ಶೇ.90ರಷ್ಟು ಕುರುಬ ಸಮುದಾಯ ಮತ್ತು ಅಹಿಂದ ವರ್ಗದವರ ಆಶೀರ್ವಾದ ನಮಗಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಮಹತ್ವದ ಪಾತ್ರ ವಹಿಸಲಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತಕ್ಕೆ ಅಹಿಂದ ವರ್ಗ ಕಾರಣ, ಇಲ್ಲಿ ಕುರುಬ ಸಮಾಜದ್ದು ಮಹತ್ವದ ಪಾತ್ರವಿದೆ" ಎಂದರು.

"ಸಿದ್ದರಾಮಯ್ಯನವರ ಆಟ ಇನ್ನು ಕರ್ನಾಟಕ ರಾಜ್ಯದಲ್ಲಿ ನಡೆಯುವುದಿಲ್ಲ. ನಾಲ್ಕುವರೆ ವರ್ಷದಲ್ಲಿ ಎಷ್ಟು ಕುರುಬರನ್ನು ಮಂತ್ರಿ ಮಾಡಿದ್ದೀರಿ. ಸಮಾಜದ ಕಣ್ಣೊರೆಸಲು ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ನೀಡಿದ್ದೀರಿ, ಸಿದ್ದರಾಮಯ್ಯ ಮಗನಿಗೆ ಚುನಾವಣೆ ಅಖಾಡ ಸಿದ್ಧ ಮಾಡುತ್ತಿದ್ದಾರೆ. ಇದು ಅಹಿಂದ ತತ್ವವೇ" ಎಂದರು.

"ಜಾರಕಿಹೊಳಿ, ಎಚ್.ವಿಶ್ವನಾಥ್ ಅವರನ್ನು ಕಡೆಗಣಿಸಿದ್ದೀರಿ, ಮೇಲ್ವರ್ಗದವರಿಗೆ ಮಣೆ ಹಾಕುತ್ತಿದ್ದೀರಿ. ಅವರು ನಿಮ್ಮ ಕೈ ಹಿಡಿಯುವುದಿಲ್ಲ. ನೀವು ಸಿಎಂ ಆಗಲಿ ಅಂತ ಲಕ್ಷಾಂತರ ಕುರುಬರು ಆಸೆ ಪಟ್ಟಿದ್ದು ನಿಜ. ಬಿಜೆಪಿ ಏಜೆಂಟ್ ಅಂತ ನನಗೆ ಹೇಳಿದ್ದೀರಿ, ವೇದಿಕೆ ಸಿದ್ದ ಮಾಡಿ ಯಾರು ಏಜೆಂಟ್ ಬಹಿರಂಗ ಮಾಡುವೆ" ಎಂದು ವಾಗ್ದಾಳಿ ನಡೆಸಿದರು.

"ನೀವು 8 ಕೋಟಿ ರೂ.ಹಣ ಪಡೆದು ಬಿಎಸ್‌ವೈಅವರನ್ನು ಸಿಎಂ ಮಾಡಲು ಶ್ರಮಿಸಿದ್ದೀರಿ. ಹೊಗಳು ಭಟ್ಟರಿಗೆ ಉತ್ತಮ ಸ್ಥಾನ ಕೊಡುತ್ತಿದ್ದೀರಿ. ವೀರಶೈವ- ಲಿಂಗಾಯತ ಸಮಾಜ ಒಡೆದಿದ್ದೀರಿ. ಹಿನ್ನೆಲೆ ಗಾಯಕ ಸಮಾಜವನ್ನು ಒಡೆಯುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು" ಎಂದು ಟೀಕಿಸಿದರು.

"ಗೆದ್ದಲು ಹುಳು ಕಟ್ಟಿದ ಹುತ್ತಕ್ಕೆ ನಾಗರಹಾವು ಬಂದು ಸೇರುತ್ತದೆ. ಕಾಂಗ್ರೆಸ್ ಕಟ್ಟಿದವರನ್ನು ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗಣಿಸಿದ್ದಾರೆ. ಅದೇ ರೀತಿ ಯಡಿಯೂರಪ್ಪನವರೂ ಗೋಮುಖ ವ್ಯಾಘ್ರ" ಎಂದು ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News