ಕೆಲಸ ಮಾಡುವುದಾದರೆ ಮಾಡಿ, ಇಲ್ಲ ಅಂದ್ರೆ ನಾವು ನೋಡಿಕೊಳ್ಳುತ್ತೇವೆ: ಬಿಜೆಪಿ ಮುಖಂಡರಿಗೆ ಅಮಿತ್ ಶಾ ಎಚ್ಚರಿಕೆ

Update: 2017-12-31 15:01 GMT

ಬೆಂಗಳೂರು, ಡಿ. 31: ‘ಶೇ.45ರಷ್ಟು ಮುಸ್ಲಿಮರಿರುವ ಎರಡೂ ರಾಜ್ಯಗಳಲ್ಲಿ ನಾವು ಗೆಲುವು ಸಾಧಿಸಿದ್ದು, ಹಿಂದೂಗಳು ಬಾಹುಳ್ಯವುಳ್ಳ ಕರ್ನಾಟಕ ರಾಜ್ಯದಲ್ಲಿ ನಾವು ಗೆಲ್ಲುವುದು ಕಷ್ಟವಲ್ಲ. ನೀವು ಕೆಲಸ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ನಾವು ನೋಡಿಕೊಳ್ಳುತ್ತೇವೆ’ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ರಾಜ್ಯದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. 

ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ಅಮಿತ್ ಶಾ, ಟಿಕೆಟ್ ನೀಡುವ ವಿಚಾರ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸೂಚಿಸಿದ್ದಾರೆ. ಬೂತ್ ಮಟ್ಟದಿಂದಲೇ ಪಕ್ಷವನ್ನು ಸದೃಢಗೊಳಿಸಬೇಕು. ನಮಗೆ ಅತ್ಯಂತ ಕಡಿಮೆ ಸಮಯವಿದ್ದು, ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಎಂದು ನಿರ್ದೇಶನ ನೀಡಿದ ಅವರು, ಯಾರಿಗೆ ಟಿಕೆಟ್ ನೀಡಬೇಕಿದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.

2018ರ ಜನವರಿ 9ಕ್ಕೆ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದು, ಜನವರಿ 10ಕ್ಕೆ ಚಿತ್ರದುರ್ಗಕ್ಕೆ ತೆರಳಲಿದ್ದು, ಸಭೆಯ ವಿಚಾರಗಳನ್ನು ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ಸೋರಿಕೆ ಆಗಬಾರದು. ಜಿಲ್ಲೆಗಳಿಗೆ ನಾನೇ ಬಂದು ಕೂರುತ್ತೇನೆ ಎಂದು ಮುಖಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆಂದು ಹೇಳಲಾಗಿದೆ.

ಕೈ ಭರವಸೆ ಈಡೇರಿಕೆ ಪರಿಶೀಲನೆ: 2018ರ ಜನವರಿ 16ರೊಳಗೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ನೀಡಿದ್ದ ಭರವಸೆಗಳ ಈಡೇರಿಕೆಯ ಬಗ್ಗೆ ಪರಿಶೀಲನೆ ನಡೆಸಲಿದ್ದು, ಆ ಬಳಿಕ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಬಿಜೆಪಿ ಸಮಾವೇಶನಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಕರ್ನಾಟಕದ ಇಂದಿನ ದುಸ್ಥಿತಿಗೆ ಕಾಂಗ್ರೆಸ್ ಸರಕಾರ ಕಾರಣ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಕಾನೂನು ವ್ಯವಸ್ಥೆ ಕುಸಿದಿದೆ ಎಂದು ದೂರಿದರು.

2.5ಲಕ್ಷ ಕೋಟಿ ರೂ.ಸಾಲ ಮಾಡಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. 3,600ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಹೀಗಾಗಿ ಸರರ್ಕಾರದ ವಿರುದ್ಧ ವ್ಯಾಪಕ ಅಭಿಯಾನ ನಡೆಸಲು ನಿರ್ಧಾರಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ 19 ರಾಜ್ಯಗಳನ್ನು ಬಿಜೆಪಿ ಗೆದ್ದಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕ, ಮೇಘಾಲಯ, ತ್ರಿಪುರಾ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಅವರು, ಜ.16 ರಿಂದ 22ರ ವರೆಗೆ ಜನಜಾಗೃತಿ ಯಾತ್ರೆ ನಡೆಯಲಿದೆ. ಫೆಬ್ರುವರಿ ಕೊನೆಯೊಳಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ 224 ಕ್ಷೇತ್ರಗಳಲ್ಲಿಯೂ ಒಬಿಸಿ, ದಲಿತ ಹಾಗೂ ಮಹಿಳಾ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದ್ದು, 145 ಕ್ಷೇತ್ರದಲ್ಲಿ ಈಗಾಗಲೇ ಯಾತ್ರೆ ಮುಗಿಸಿದ್ದಾರೆ ಎಂದ ಅವರು, ಒಗ್ಗಟ್ಟಿನಿಂದ ಪರಿವರ್ತನಾ ಯಾತ್ರೆ ನಡೆಯುತ್ತಿದೆ ಎಂದರು.

ರಾಜ್ಯಾಧ್ಯಕ್ಷ ಯಡಿಯೂರಪ್ಪ, ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವಡೆಕರ್, ಸಹ ಉಸ್ತುವಾರಿ ಪಿಯುಷ್ ಗೋಯೆಲ್, ಉಸ್ತುವಾರಿ ಮುರುಳೀಧರ್ ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಆಗಮನ ಬಿಜೆಪಿಗೆ ಹೊಸ ಶಕ್ತಿ ತುಂಬಿದೆ. ಗುಜರಾತ್‌ನಲ್ಲಿ ಆರು ಬಾರಿ ಗೆಲುವು ಸಾಧಿಸಿದೆ. ಬಿಎಸ್‌ವೈ ನೇತೃತ್ವದ ಪರಿವರ್ತನಾ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ’

-ಅನಂತಕುಮಾರ್ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News