ತತ್ಕಾಲ್ ಬುಕಿಂಗ್‌ಗೆ ನಕಲಿ ಸಾಫ್ಟ್ ವೇರ್ : ಸಿಬಿಐ ಕಚೇರಿಯ ಉದ್ಯೋಗಿಯ ಬಂಧನ

Update: 2017-12-31 15:44 GMT

ಹೊಸದಿಲ್ಲಿ, ಡಿ.31: ರೈಲ್ವೇಯಲ್ಲಿ ತತ್ಕಾಲ್ ಟಿಕೆಟ್ ಮುಂಗಡ ಕಾಯ್ದಿರಿಸಲು ಟ್ರಾವೆಲ್ ಏಜೆಂಟರು ಬಳಸುವ ಆನ್‌ಲೈನ್ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಹೋಲುವ ವ್ಯವಸ್ಥೆಯೊಂದನ್ನು ಟೆಕ್ಕಿಯೊಬ್ಬ ಅಭಿವೃದ್ಧಿಗೊಳಿಸಿರುವ ಕುರಿತು ಸಿಬಿಐ ಪರಿಶೀಲನೆ ನಡೆಸುತ್ತಿದೆ.

  ಸಿಬಿಐಯಲ್ಲಿ ಅಸಿಸ್ಟೆಂಟ್ ಪ್ರೋಗಾಮರ್ ಆಗಿರುವ ಅಜಯ್ ಗಾರ್ಗ್ ಎಂಬಾತ ಈ ರೀತಿಯ ನಕಲಿ ಸಾಫ್ಟ್‌ವೇರ್ ಅಭಿವೃದ್ಧಿಗೊಳಿಸಿದ್ದಾನೆ ಎನ್ನಲಾಗಿದೆ. ಇದೀಗ ಇಂತಹ ಹಲವು ಸಾಫ್ಟ್‌ವೇರ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕಿರುವುದನ್ನು ಮತ್ತು ಇದರಲ್ಲಿ ಗಾರ್ಗ್ ರೂಪಿಸಿರುವ ‘ನಿಯೊ’ ಸಾಫ್ಟ್‌ವೇರ್ ವ್ಯವಸ್ಥೆ ಕೂಡಾ ಸೇರಿರುವುದನ್ನು ಸಿಬಿಐ ಪತ್ತೆಹಚ್ಚಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬೆಳಿಗ್ಗೆ 10:00ಕ್ಕೆ ತತ್ಕಾಲ್ ಬುಕ್ಕಿಂಗ್ ಆರಂಭವಾಗುವ ಮೊದಲೇ ಸೀಟುಗಳು ಸ್ವಯಂ ಬುಕ್ಕಿಂಗ್ ಆಗುವ ವ್ಯವಸ್ಥೆಯನ್ನು ಈ ಸಾಫ್ಟ್‌ವೇರ್ ಹೊಂದಿದೆ. ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡುವ ಉದ್ದೇಶದಿಂದ ಮಾಹಿತಿ ತುಂಬುವ ಮೊದಲೇ ‘ತತ್ಕಾಲ್’ ಸೀಟುಗಳು ಭರ್ತಿಯಾಗಿರುತ್ತವೆ ಎಂಬುದು ಪ್ರಯಾಣಿಕರ ದೂರಾಗಿದೆ. ತಮ್ಮ ಬುಕ್ಕಿಂಗನ್ನು ತಳ್ಳಿಹಾಕಲಾಗುತ್ತದೆ ಅಥವಾ ‘ವೆಯ್ಟ್ ಲಿಸ್ಟೆಡ್ ಟಿಕೆಟ್’ ವರ್ಗದಡಿ ಹೆಚ್ಚಿನ ದರ ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಅಸಿಸ್ಟೆಂಟ್ ಪ್ರೋಗ್ರಾಮರ್ ಗಾರ್ಗ್ ಮತ್ತು ಆತನ ಸಹಾಯಕ ಅನಿಲ್ ಗುಪ್ತಾನನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News