ರಾಜಕೀಯ ‘ಬಾಬಾ’ ಆಗಲು ಹೊರಟಿರುವ ರಜನಿಕಾಂತ್

Update: 2017-12-31 18:39 GMT

ರಜನಿಕಾಂತ್ ಮೊದಲ ಬಾರಿಗೆ ಡ್ಯೂಪ್ ಇಲ್ಲದೆ, ಮೇಕಪ್ ಇಲ್ಲದೆ, ಗ್ರಾಫಿಕ್ಸ್ ಇಲ್ಲದೆ ನಟಿಸಲು ಹೊರಟಿದ್ದಾರೆ. ಈ ‘ರಾಜಕೀಯ ಚಿತ್ರ’ದ ನಿರ್ಮಾಪಕ, ನಿರ್ದೇಶಕ ಎಲ್ಲವೂ ಸ್ವತಃ ರಜನಿಕಾಂತ್ ಅವರೇ ಎಂದು ನಂಬಲಾಗಿದೆ. ತಮ್ಮದೇ ‘ಬಾಬಾ’ ಎನ್ನುವ ವಿಫಲ ಚಿತ್ರವೊಂದರ ಬೆರಳಿನ ಸಂಕೇತವನ್ನು ತಮಿಳುನಾಡಿನ ಜನರ ಮುಂದೆ ಅವರು ಪ್ರದರ್ಶಿಸುತ್ತಾ, ರಾಜಕೀಯ ಪ್ರವೇಶವನ್ನು ಸ್ಪಷ್ಟಪಡಿಸಿದ್ದಾರೆ. ಜಾತಿ ರಹಿತವಾದ ಆಧ್ಯಾತ್ಮಿಕ ತಳಹದಿಯಲ್ಲಿ ರಾಜಕೀಯ ಪಕ್ಷವನ್ನು ಕಟ್ಟಿ ನಿಲ್ಲಿಸುವ ಕುರಿತಂತೆ ಘೋಷಣೆಯನ್ನೂ ಮಾಡಿದ್ದಾರೆ. ಇದರ ಜೊತೆಗೆ ಕೃಷ್ಣ ಭಗವದ್ಗೀತೆಯಲ್ಲಿ ಉದ್ಗರಿಸಿದ ಶ್ಲೋಕವನ್ನೂ ಪಠಿಸಿದ್ದಾರೆ. ರಜನಿಕಾಂತ್‌ರ ಈ ಘೋಷಣೆಯಿಂದಾಗಿ ಉತ್ತರ ಭಾರತದ ರಾಜಕಾರಣಿಗಳು ತಮಿಳುನಾಡಿನ ಕಡೆಗೆ ಕುತೂಹಲದಿಂದ ಇಣುಕಿ ನೋಡುವಂತಾಗಿದೆ.

ರಜನಿಕಾಂತ್‌ರ ರಾಜಕೀಯ ಪ್ರವೇಶ ಇಡೀ ದಕ್ಷಿಣ ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರಲಿದೆಯೇ ಅಥವಾ ಅವರ ಬಾಬಾ ಚಿತ್ರದಂತೆ ಬರೇ ಸುದ್ದಿಯಾಗುವುದರಲ್ಲೇ ಮುಗಿದು ಹೋಗಲಿದೆಯೇ ಎನ್ನುವುದನ್ನು ಚುನಾವಣಾ ಬಾಕ್ಸ್ ಆಫೀಸ್ ಹೇಳಬೇಕು. ಒಂದಾನೊಂದು ಕಾಲದ ಎಂಜಿಆರ್ ಆಗುವುದಕ್ಕೆ ಅವರು ಮೊದಲ ಹೆಜ್ಜೆ ಇಟ್ಟಿದ್ದಾರೆ ಎನ್ನುವುದಂತೂ ಸತ್ಯ. ಆದರೆ ಎಂಜಿಆರ್ ಕಾಲದ ರಾಜಕೀಯ ವಾತಾವರಣ ಈಗ ಇದೆಯೇ? ಜನರ ಮನವನ್ನು ಗೆಲ್ಲಲು ಎಂಜಿಆರ್ ಅವರಿಗಿದ್ದ ವರ್ಚಸ್ಸು, ಆತ್ಮಶಕ್ತಿ ರಜನಿಕಾಂತ್ ಅವರಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಿಲ್ಲ. ಜಯಲಲಿತಾ ನಿಧನರಾದ ದಿನದಿಂದ ತಮಿಳುನಾಡು ರಾಜಕೀಯದ ಮೇಲೆ ರಾಷ್ಟ್ರಮಟ್ಟದ ರಾಜಕೀಯ ನಾಯಕರ ಕಣ್ಣು ಬಿದ್ದಿದೆ. ಜಯಲಲಿತಾರ ನಿರ್ಗಮನದಿಂದ ಉಳಿದಿರುವ ವಿಶಾಲವಾದ ಖಾಲಿ ಜಾಗ ಎಲ್ಲ ಪ್ರಮುಖ ರಾಷ್ಟ್ರೀಯ ಪಕ್ಷವನ್ನು ಸೆಳೆದಿದೆ. ಆ ಜಾಗವನ್ನು ತುಂಬುವ ಶಕ್ತಿ ಎಡಿಎಂಕೆಯಲ್ಲಾಗಲಿ, ಡಿಎಂಕೆಯಲ್ಲಾಗಲಿ ಇಲ್ಲಾ ಎನ್ನುವುದನ್ನು ಅವರು ಅರಿತುಕೊಂಡಿದ್ದಾರೆ.

ಇಂದು, ಸಂಘಪರಿವಾರ ಮತ್ತು ಬಿಜೆಪಿಗೆ ದಕ್ಷಿಣ ಭಾರತದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗದೇ ಇರಲು ಮುಖ್ಯ ಕಾರಣ, ತಮಿಳುನಾಡಿನ ದ್ರಾವಿಡ ಚಳವಳಿಯ ಕಾವು ಇನ್ನೂ ಜೀವಂತವಿರುವುದು. ಜಯಲಲಿತಾ ನೇತೃತ್ವದ ಎಡಿಎಂಕೆಯಲ್ಲಿ ದ್ರಾವಿಡ ಹೋರಾಟದ ಧ್ಯೇಯಗಳು ನಿಸ್ತೇಜವಾಗಿದ್ದುದು ನಿಜವಾಗಿದ್ದರೂ, ಅದು ಪ್ರತಿಪಾದಿಸುತ್ತಿದ್ದ ಪ್ರಾದೇಶಿಕತೆ ‘ಹುಸಿ ರಾಷ್ಟ್ರೀಯತೆ’ಗೆ ಪ್ರಬಲ ಪ್ರತಿರೋಧವನ್ನು ಒಡ್ಡಿತ್ತು. ಜಯಲಲಿತಾ ಬಳಿಕ ಅವರ ರಾಜಕೀಯ ಒಡನಾಡಿಯಾಗಿದ್ದ ಶಶಿಕಲಾ ಅಧಿಕಾರಕ್ಕೇರುವ ಎಲ್ಲ ಶಕ್ತಿಯನ್ನು ಹೊಂದಿದ್ದರಾದರೂ, ಅವರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳು ಅದಕ್ಕೆ ಅಡ್ಡಿಯಾದವು. ಈ ಸಂದರ್ಭವನ್ನು ಮೋದಿ ಮತ್ತು ಅಮಿತ್ ಶಾ ತಮಗೆ ಪೂರಕವಾಗಿ ಬಳಸಿಕೊಳ್ಳಲು ಯತ್ನಿಸಿದರು. ಅದಕ್ಕಾಗಿ ಪನ್ನೀರ್ ಸೆಲ್ವಂ ಎನ್ನುವ ವ್ಯಕ್ತಿಯನ್ನು ಸೂತ್ರದ ಗೊಂಬೆಯಾಗಿಸಿಕೊಂಡರು. ಶಶಿಕಲಾ ಜೈಲು ಸೇರಿ, ಪನ್ನೀರ್ ಸೆಲ್ವಂ ಸರಕಾರದ ಭಾಗೀದಾರರಾಗುವ ಮೂಲಕ ಬಿಜೆಪಿ ಒಂದು ಹಂತದಲ್ಲಿ ತಮಿಳುನಾಡಿನ ನಿಯಂತ್ರಣವನ್ನು ಕೈಗೆ ತೆಗೆದುಕೊಂಡಿತ್ತು. ಪನ್ನೀರ್ ಸೆಲ್ವಂರನ್ನು ಸರಕಾರದ ಭಾಗವಾಗಿಸುವಲ್ಲಿ ದಿಲ್ಲಿಯ ಬಿಜೆಪಿ ನಾಯಕರ ಪಾತ್ರ ಬಹುದೊಡ್ಡದಿತ್ತು. ಆದರೆ ಬಿಜೆಪಿಯ ಈ ಎಲ್ಲ ಸಂಚುಗಳು ಆರ್. ಕೆ. ನಗರ ಉಪಚುನಾವಣೆಯಲ್ಲಿ ವಿಫಲವಾದವು.

ಜಯಲಲಿತಾರ ಕ್ಷೇತ್ರವಾಗಿರುವ ಆರ್. ಕೆ. ನಗರದಲ್ಲಿ ಶಶಿಕಲಾ ಬೆಂಬಲಿತ ಅಭ್ಯರ್ಥಿ ದಿನಕರನ್ ಪಕ್ಷೇತರರಾಗಿ ನಿಂತು ಎಡಿಎಂಕೆ ವಿರುದ್ಧ ಭಾರೀ ವಿಜಯವನ್ನು ತನ್ನದಾಗಿಸಿದರು. ಶಶಿಕಲಾ ಮೇಲೆ ತಮಿಳು ನಾಡಿನ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ ಎನ್ನುವುದಕ್ಕೆ ಈ ವಿಜಯ ಸಾಕ್ಷಿಯಾಗಿದೆ. ಶಶಿಕಲಾ ಅವರಿಗೆ ದ್ರೋಹವೆಸಗಿದ ಪಳನಿಸ್ವಾಮಿ ನೇತೃತ್ವದ ಎಡಿಎಂಕೆ ಸರಕಾರಕ್ಕೆ ಮಾತ್ರವಲ್ಲ, ಕೇಂದ್ರ ಬಿಜೆಪಿಗೂ ಇದು ಭಾರೀ ಮುಖಭಂಗವನ್ನುಂಟು ಮಾಡಿತು. ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡದ್ದು ಮಾತ್ರವಲ್ಲ, ನೋಟಾ ಮತಗಳಿಗಿಂತಲೂ ಕಡಿಮೆ ಮತಗಳು ಇವರಿಗೆ ಬಿದ್ದವು. ಆರ್. ಕೆ. ನಗರದಲ್ಲಿ ದಿನಕರನ್ ಗೆದ್ದ ಬೆನ್ನಿಗೇ ತಮಿಳುನಾಡು ರಾಜಕೀಯ ಚುರುಕಾಗಿವೆ. ಆಡಳಿತಾರೂಢ ಎಡಿಎಂಕೆಯಿಂದ ಒಬ್ಬೊಬ್ಬರಾಗಿ ಮತ್ತೆ ಶಶಿಕಲಾ ತೆಕ್ಕೆಗೆ ಜಾರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದ್ದಾರೆ.

ಜಯಲಲಿತಾ ಅವರೊಂದಿಗೆ ಎಂಜಿಆರ್ ಅಧ್ಯಾಯ ಮುಗಿದಿದ್ದು, ಹೊಸ ಸೂಪರ್ ಸ್ಟಾರ್‌ಗಾಗಿ ತಮಿಳು ನಾಡು ಕಾಯುತ್ತಿದೆ ಎಂದು ರಜನಿಕಾಂತ್ ಪೂರ್ಣವಾಗಿ ನಂಬಿದ್ದಾರೆ. ಆದರೆ ಎಂಜಿಆರ್ ಮತ್ತು ರಜನಿಕಾಂತ್ ಕಾಲಘಟ್ಟ ಸಂಪೂರ್ಣ ಭಿನ್ನವಾದುದು. ಎಂಟಿಆರ್ ಆಂಧ್ರದಲ್ಲಿ ಬೇರು ಬಿಟ್ಟ ಹಾಗೆ ಚಿರಂಜೀವಿಯವರಿಗೆ ಬೇರು ಬಿಡುವುದು ಸಾಧ್ಯವಾಗಲಿಲ್ಲ. ರಜನಿಕಾಂತ್ ಈ ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಪರದೆಯ ಮರೆಯಲ್ಲಿ ರಾಜಕೀಯಗಳನ್ನು ನಿಯಂತ್ರಿಸುತ್ತಿದ್ದದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತಾ ಬಂದಿವೆ. ಜಯಲಲಿತಾರ ವಿಜಯದಲ್ಲಿ ತನ್ನ ಪಾತ್ರವಿದೆ ಎಂದು ಇತ್ತೀಚೆಗೆ ರಜನೀಕಾಂತ್ ಹೇಳಿಕೆಯೊಂದನ್ನು ನೀಡಿದ್ದರು. ರಜನಿಕಾಂತ್ ಸಿನೆಮಾದಲ್ಲಿ ಸೂಪರ್ ಸ್ಟಾರ್ ಎಷ್ಟು ನಿಜವೋ, ಒಬ್ಬ ಮನುಷ್ಯನಾಗಿಯೂ ಅಷ್ಟೇ ಆತ್ಮೀಯವಾಗಿ ತಮಿಳರ ಎದೆಯಲ್ಲಿ ನೆಲೆಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ತಳಸ್ತರದಿಂದ ಮೇಲೇರಿ ಬಂದವರು ರಜನಿಕಾಂತ್. ಜನರ ಕಷ್ಟ, ನೋವು ಅವರಿಗೆ ಗೊತ್ತಿದೆ. ಜೊತೆಗೆ ತಮಿಳುನಾಡಿನ ಇಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಅವರಿಗೆ ಸ್ಪಷ್ಟ ಅರಿವಿದೆ.

ಆದರೆ ನೇರವಾಗಿ ರಾಜಕೀಯದ ಜೊತೆಗೆ ನಂಟನ್ನು ಅವರು ಇದೇ ಮೊದಲ ಬಾರಿ ಘೋಷಿಸಿರುವುದು. ರಜನಿಕಾಂತ್ ಅವರ ಮುಂದಿರುವ ದೊಡ್ಡ ಸಮಸ್ಯೆ, ಅವರ ವಯಸ್ಸು, ಆರೋಗ್ಯ. ಈ ಇಳಿವಯಸ್ಸಿನಲ್ಲಿ ರಾಜಕೀಯಕ್ಕಿಳಿದು ಹೊಸ ಪಕ್ಷವನ್ನು ಕಟ್ಟಿ, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಒಟ್ಟು ಸೇರಿಸಬೇಕು. ಅಭಿಮಾನಿಗಳೆಲ್ಲರೂ ಕಾರ್ಯಕರ್ತರಾಗಿ ಪರಿವರ್ತನೆಯಾಗುತ್ತಾರೆ ಎನ್ನುವುದನ್ನು ಇಂದಿನ ದಿನಗಳಲ್ಲಿ ಊಹಿಸುವಂತಿಲ್ಲ. ಸದ್ಯಕ್ಕೆ ತಮಿಳಿಗೆ ಹೊಸ ನಾಯಕನೊಬ್ಬನ ಅಗತ್ಯವಂತೂ ಇದೆ. ಆದರೆ ಸಿನೆಮಾ ಸೃಷ್ಟಿಸಿರುವ ಒಂದು ಪ್ರಭಾವಳಿಯನ್ನು ನಂಬಿಕೊಂಡು ಈ ಇಳಿ ವಯಸ್ಸಿನಲ್ಲಿ ರಜನಿಕಾಂತ್ ರಾಜಕೀಯಕ್ಕೆ ಕಾಲಿಡುವುದು ಮುತ್ಸದ್ದಿತನವೇ?

ರಜನಿಕಾಂತ್ ‘ಬಾಬಾ’ ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಅವರು ಆಧ್ಯಾತ್ಮಿಕ ನಾಯಕನಾಗಿ ಹಾಗೂ ರಾಜಕೀಯ ನಾಯಕನಾಗಿ ಏಕಕಾಲದಲ್ಲಿ ಕಾರ್ಯನಿರ್ವಹಿಸಿದ್ದರು. ನಾಯಕನಿಗೆ ಆ ಚಿತ್ರದಲ್ಲಿ ಒಬ್ಬ ಆಧ್ಯಾತ್ಮಿಕ ಗುರುವೂ ಇದ್ದ. ಆ ಗುರುವಿಗೆ ಒಂದು ಸಂಕೇತವೂ ಇತ್ತು. ಆದರೆ ಈ ಚಿತ್ರವನ್ನು ಜನರು ಸ್ವೀಕರಿಸಿರಲಿಲ್ಲ. ಇದೀಗ ರಜನಿಕಾಂತ್ ಮಾತುಗಳನ್ನು ಕೇಳುತ್ತಿದ್ದರೆ ಅವರು, ಆ ಚಿತ್ರಕತೆಯನ್ನೇ ನೇರವಾಗಿ ರಾಜಕೀಯದಲ್ಲಿ ಅನುಷ್ಠಾನಕ್ಕಿಳಿಸಲು ಹೊರಟಿದ್ದಾರೆ. ರಜನಿಕಾಂತ್‌ರ ಮಾತುಗಳನ್ನು ಕೇಳಿದರೆ, ಅಲ್ಲಿ ದ್ರಾವಿಡ ಮನಸ್ಸು ಕೆಲಸ ಮಾಡಿದಂತೆ ಇಲ್ಲ. ಕೃಷ್ಣ, ಭಗವದ್ಗೀತೆ, ಅಧ್ಯಾತ್ಮ ಇತ್ಯಾದಿಗಳ ಮೇಲೆ ಹೆಜ್ಜೆ ಇಡುವ ನಾಯಕರು ತುಸು ಜಾರಿದರೆ ಬಿಜೆಪಿಯ ಬಾಣಲೆಗೆ ಹೋಗಿ ಬೀಳುತ್ತಾರೆ. ತಮಿಳರ ಅಸ್ಮಿತೆ, ದ್ರಾವಿಡ ಚಿಂತನೆ, ಪ್ರಾದೇಶಿಕತೆ ಇವುಗಳ ಮೇಲೆ ರಜನಿಕಾಂತ್ ಎಷ್ಟರಮಟ್ಟಿಗೆ ನಂಬಿಕೆ ಇಟ್ಟಿದ್ದಾರೆ ಎನ್ನುವುದರಲ್ಲಿ ಅವರ ರಾಜಕೀಯ ಭವಿಷ್ಯ ನಿಂತಿದೆ. ಇಲ್ಲವಾದರೆ, ಅವರನ್ನು ಬಳಸಿಕೊಂಡು ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯಸಾಧನೆಗಳನ್ನು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News