ಇರಾನ್‌ನ ವಿವಿಧೆಡೆ ಹಿಂಸಾರೂಪ ಪಡೆದ ಪ್ರತಿಭಟನೆ: ಶಾಂತಿಗಾಗಿ ರೂಹಾನಿ ಮನವಿ

Update: 2018-01-01 17:28 GMT

ಟೆಹರಾನ್, ಜ.1: ಇರಾನ್‌ನ ವಿವಿಧೆಡೆ ಆಡಳಿತ ವಿರೋಧಿ ಪ್ರತಿಭಟನೆ ಕಾಡ್ಗಿಚ್ಚಿನಂತೆ ಹರಡುತ್ತಿರುವಂತೆಯೇ, ಅಧ್ಯಕ್ಷ ಹಸನ್ ರೂಹಾನಿ ಅವರು ಶಾಂತಿಯಿಂದ ವರ್ತಿಸುವಂತೆ ಪ್ರತಿಭಟನಕಾರರಿಗೆ ಕರೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಸರಕಾರದ ವಿರುದ್ಧ ಟೀಕೆ,ಟಿಪ್ಪಣಿಗಳಿಗೆ ಇನ್ನೂ ಹೆಚ್ಚಿನ ಅವಕಾಶ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ದೇಶದಾದ್ಯಂತ ಭುಗಿಲೆದ್ದಿರುವ ಸರಕಾರಿ ವಿರೋಧಿ ಪ್ರತಿಭಟನೆಯ ಬಗ್ಗೆ ರೂಹಾನಿ ನೀಡಿರುವ ಮೊದಲ ಬಹಿರಂಗ ಪ್ರತಿಕ್ರಿಯೆ ಇದಾಗಿದೆ.

ಪ್ರತಿಭಟನೆಯ ಹೆಸರಿನಲ್ಲಿ ಜನರು ಹಿಂಸಾಚಾರಕ್ಕಿಳಿಯುವುದನ್ನು ಖಂಡಿಸಿದ ರೂಹಾನಿ, ತನ್ನ ಸರಕಾರವು ಟೀಕೆಗಳಿಗೆ ಮುಕ್ತಾವಕಾಶವನ್ನು ನೀಡುವುದಾಗಿ ತಿಳಿಸಿದರು.

ಈ ಮಧ್ಯೆ ರವಿವಾರವೂ ಇರಾನ್ ವಿವಿಧೆಡೆ ಪ್ರತಿಭಟನೆಗಳು ಹಿಂಸಾರೂಪ ಪಡೆದಿರುವುದಾಗಿ ವರದಿಗಳು ತಿಳಿಸಿವೆ. ವಾಯುವ್ಯದ ಪುಟ್ಟ ಪಟ್ಟಣವಾದ ಟಾಕೆಸ್ತಾನ್‌ನಲ್ಲಿ ಪ್ರತಿಭಟನಕಾರರು ಧರ್ಮಗುರುಗಳ ಶಿಕ್ಷಣ ಕೇಂದ್ರ ಹಾಗೂ ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ದೊರುಡ್‌ನಲ್ಲಿ ಅಪಹರಣಗೊಂಡ ಅಗ್ನಿಶಾಮಕದಳದ ವಾಹನವು ಢಿಕ್ಕಿ ಹೊಡೆದು, ಇಬ್ಬರು ಮೃತಪಟ್ಟಿದ್ದಾರೆಂದು ಸರಕಾರಿ ಸುದ್ದಿವಾಹಿನಿ ತಿಳಿಸಿದೆ.

ಇಝೆಹ್, ಕೆರ್ಮಾನ್‌ಶಾ ಹಾಗೂ ಖೊರ್ರಂಬಾದ್,ಶಾಹಿನ್‌ಶಾರ್ ಹಾಗೂ ಝಾಂಜನ್ ನಗರಗಳಲ್ಲಿ ವ್ಯಾಪಕವಾದ ಪ್ರತಿಭಟನೆಗಳು ನಡೆದಿರುವುದಾಗಿ ವರದಿಗಳು ತಿಳಿಸಿವೆ.

ಈ ಮಧ್ಯೆ ಪ್ರತಿಭಟನೆಗಳು ದೇಶದ ವಿವಿಧೆಡೆ ಹರಡುವುದನ್ನು ತಡೆಯುವ ಪ್ರಯತ್ನವಾಗಿ ಇರಾನ್ ಆಡಳಿತವು ಇಂಟರ್‌ನೆಟ್ ಮೇಲೆ ನಿರ್ಬಂಧ ವಿಧಿಸಿದ್ದು, ಫೇಸ್‌ಬುಕ್, ಟ್ವಿಟರ್ ಮತ್ತಿತರ ಜಾಲತಾಣಗಳ ಪ್ರಸಾರವನ್ನು ಸ್ಥಗಿತಗೊಳಿಸಿದೆ.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಖಂಡಿಸಿ ಮಾಶಂಡ್ ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆಯು ಆನಂತರ ಆಡಳಿತ ವಿರೋಧಿ ಚಳವಳಿಯಾಗಿ ಮಾರ್ಪಟ್ಟಿತ್ತು. ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ರವಿವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಇನ್ನೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕುಸಿದ ಅರ್ಥಿಕತೆ; ಭುಗಿಲೆದ್ದ ಅಸಮಾಧಾನ

 ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸುವ ಹಾಗೂ ಸಾಮಾಜಿಕ ಉದ್ವಿಗ್ನತೆಯನ್ನು ಶಮನಗೊಳಿಸುವಲ ಭರವಸೆಯೊಂದಿಗೆ ಹಸನ್ ರೂಹಾನಿ 2013ರಲ್ಲಿ ಅಧಿಕಾರಕ್ಕೇರಿದ್ದರು. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನವೆಚ್ಚ ಹಾಗೂ ನಿರುದ್ಯೋಗಪ್ರಮಾಣದಲ್ಲಿ ಶೇ. 12ರಷ್ಟು ಏರಿಕೆಯು, ದೇಶದಲ್ಲಿ ಆರ್ಥಿಕ ಪ್ರಗತಿ ತುಂಬಾ ಕುಂಠಿತವಾಗಿರುವ ಬಗ್ಗೆ ಭಾರೀ ಸಂಖ್ಯೆಯ ಇರಾನ್ ಪ್ರಜೆಗಳು ಅಸಮಾಧಾನ ಹೊಂದಿದ್ದಾರೆ.

 ಇರಾನ್‌ನ ಜನತೆ ತಮ್ಮ ಟೀಕೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರತಿಭಟನೆಗಳನ್ನು ಕೂಡಾ ನಡೆಸಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಆದರೆ ಟೀಕೆಯೆಂಬುದು ಹಿಂಸಾಚಾರ ಮತ್ತು ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸುವುದಕ್ಕಿಂತ ಭಿನ್ನವಾದುದಾಗಿದೆ.

ಹಸನ್ ರೂಹಾನಿ, ಇರಾನ್ ಅಧ್ಯಕ್ಷ

ಇರಾನ್‌ನ ವಿವಿಧ ನಗರಗಳಲ್ಲಿ ರವಿವಾರ ರಾತ್ರಿ ಭುಗಿಲೆದ್ದ ಪ್ರತಿಭಟನೆಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ಇರಾನ್‌ನ ಸರಕಾರಿ ಟಿವಿ ವಾಹಿನಿಯೊಂದು ವರದಿ ಮಾಡಿದೆಯೆಂದು ಅಮೆರಿಕದ ರಾಯ್ಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News