ಸಮಾಜದಲ್ಲಿ ಹುಳಿ ಹಿಂಡುತ್ತಿರುವ ಬಿಜೆಪಿಗರು: ಸಿಎಂ ಸಿದ್ದರಾಮಯ್ಯ

Update: 2018-01-04 13:38 GMT

ಅರಸೀಕೆರೆ, ಜ.4: ರಾಜ್ಯದಲ್ಲಿ ಕೆಲೆವೆಡೆ ನಡೆಯುತ್ತಿರುವ ಕೋಮುಗಲಭೆಗಳಿಗೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅರಸೀಕೆರೆಯ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಯಾಗಲು ಬಿಜೆಪಿ ಕಾರಣವಾಗಿದೆ. ಮಂಗಳೂರಿನಲ್ಲಿ ನಡೆದಿರುವ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲದಕ್ಕೂ ಗೃಹ ಸಚಿವರು ರಾಜೀನಾಮೆ ಕೊಡಲು ಆಗುತ್ತಾ ಎಂದು ಬಿಜೆಪಿ ನಾಯಕರ ಮಾತಿಗೆ ತಿರುಗೇಟು ನೀಡಿದ್ದಾರೆ.

ಕೊಲೆಯಂತಹ ಘಟನೆ ನಡೆಯಬಾರದಿತ್ತು, ಎಲ್ಲಾ ಜೀವವೂ ಅಮೂಲ್ಯ, ಕೊಲೆ ಗಡುಕರಿಗೆ ಶಿಕ್ಷೆಯಾಗಬೇಕು, ಈಗಾಗಲೇ ನಾಲ್ವರನ್ನು ಬಂಧಿ ಸಲಾಗಿದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೋಮುಗಲಭೆಯಿಂದ ಕೊಲೆಯಾಗಿದ್ದರೆ ಪರಿಹಾರ ನೀಡಲಾಗುವುದು ಎಂದ ಅವರು, ಸಮಾಜದಲ್ಲಿ ಕೋಮು ಗಲಭೆ ನಡೆಯಲು ಬಿಜೆಪಿ ಕಾರಣ,ಅವರೇ ಎಲ್ಲದಕ್ಕೂ ಹುಳಿ ಹಿಂಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದೇನೆ, ದೇವೇಗೌಡರು ಹೋರಾಟ ಮಾಡಬಾರದು ಎಂದು ಹೇಳಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬರಲು ದೇವೇಗೌಡರು ಹೋರಾಟ ಮಾಡಲಿ ನನ್ನದೇನು ಅಬ್ಯಂತರ ಇಲ್ಲ ಎಂದರು.

ಬಿಜೆಪಿಯವರು ನನ್ನ ವಿರುದ್ಧ ಭೂ ಹಗರಣದ ಆರೋಪ ಮಾಡಿರುವುದು ಈಗಾಗಲೇ ಸುಳ್ಳು ಎಂದು ಸಾಬೀತಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಬಿಜೆಪಿಯವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.

ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಮತ್ತು ಯಡಿಯೂರಪ್ಪ ಪತ್ರ ವ್ಯವಹಾರ ಮಾಡುವ ಮೂಲಕ ರಾಜಕೀಯ ನಾಟಕ ಆಡುತ್ತಿದ್ದಾರೆ. ನಾವು ಗೋವ ಸರ್ಕಾರಕ್ಕೆ 7.56 ಟಿಎಂಸಿ ನೀರು ಕೇಳಿದ್ದೇವೆ. ಕಾನೂನು ಪ್ರಕಾರ ನೀರು ಕೊಡಲು ಗೋವ ಸಿಎಂ ಮುಂದಾಗಲಿ. ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ಪ್ರಕಟ ಮಾಡಲಿ, ನಾಟಕವಾಡುವುದನ್ನು ಬಿಡಲಿ ಎಂದು ಸವಾಲು ಹಾಕಿದರು.

ವೀರಶೈವ -ಲಿಂಗಾಯತ ಧರ್ಮದ ವಿಂಗಡಣೆ ಮಾಡಲು ನಾವು ಯಾವ ಸಚಿವರನ್ನು ನೇಮಕ ಮಾಡಿಲ್ಲ.ನಮ್ಮ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂದು ಆರೋಪಿಸಿದರು.ಅರಸೀಕೆರೆ ವಿಧಾನ ಕ್ಷೇತ್ರದ ಅಭಿವೃದ್ದಿಗೆ 2500 ಕೋಟಿ ಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಸಚಿವ ಎ.ಮಂಜು, ಕಾಂಗ್ರೆಸ್ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News