ಭಾರತೀಯ ರಾಯಭಾರಿ ನನ್ನ ಪತ್ನಿ, ತಾಯಿಯೊಂದಿಗೆ ಚೀರುತ್ತಿದ್ದರು: ಕುಲಭೂಷಣ್ ಜಾಧವ್

Update: 2018-01-04 15:43 GMT

ಹೊಸದಿಲ್ಲಿ, ಜ. 4: ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್‌ರ ಇನ್ನೊಂದು ವೀಡಿಯೊವನ್ನು ಪಾಕಿಸ್ತಾನ ಗುರುವಾರ ಬಿಡುಗಡೆ ಮಾಡಿದೆ. ಪಾಕಿಸ್ತಾನದಲ್ಲಿ ಭಾರತದ ಮಾಜಿ ನೌಕಾ ಅಧಿಕಾರಿಯನ್ನು ಅವರ ಪತ್ನಿ ಹಾಗೂ ತಾಯಿ ಭೇಟಿಯಾದ ಬಳಿಕ ಪಾಕಿಸ್ತಾನ ಬಿಡುಗಡೆ ಮಾಡಿರುವ ಮೊದಲ ವೀಡಿಯೊ ಇದಾಗಿದೆ. ಈ ವೀಡಿಯೊದಲ್ಲಿ ಪತ್ನಿ ಹಾಗೂ ತಾಯಿಗೆ ತನ್ನನ್ನು ಭೇಟಿಯಾಗಲು ಅವಕಾಶ ನೀಡಿದ ಪಾಕಿಸ್ತಾನ ಸರಕಾರಕ್ಕೆ ವಂದನೆ ಸಲ್ಲಿಸಿದ್ದಾರೆ.

‘‘ಇದು ತುಂಬಾ ಆಹ್ಲಾದಕರ ಭೇಟಿ ಹಾಗೂ ನನ್ನನ್ನು ನನ್ನ ತಾಯಿ ನೋಡಿ ತುಂಬ ಸಂತಸಪಟ್ಟರು’’ ಎಂದು ಅವರು ಹೇಳಿದ್ದಾರೆ. ‘‘ನಾನು ಈಗ ತುಂಬಾ ಆರಾಮವಾಗಿದ್ದೇನೆ. ನನಗೆ ತುಂಬಾ ತೃಪ್ತಿ ಇದೆ.’’ ಎಂಬ ತಾಯಿ ಹೇಳಿಕೆಯನ್ನು ಜಾಧವ್ ಉಲ್ಲೇಖಿಸಿದ್ದಾರೆ. ತಾಯಿಯ ಮಾತಿಗೆ ಜಾಧವ್, “ಚಿಂತಿಸಬೇಡಿ ಅಮ್ಮಾ, ಅವರು ನನ್ನನ್ನು ನೋಡಿಕೊಳ್ಳುತ್ತಾರೆ. ಅವರು ನನಗೆ ತೊಂದರೆ ಮಾಡಲಾರರು. ಅವರು ನನ್ನನ್ನು ಮುಟ್ಟುವುದೂ ಇಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಭಾರತದ ಜನರು ಹಾಗೂ ಭಾರತ ಸರಕಾರದ ಬಗ್ಗೆ ತುಂಬಾ ಪ್ರಾಮುಖ್ಯವಾದ ಕೆಲವು ವಿಚಾರಗಳನ್ನು ಹೇಳುತ್ತೇನೆ ಎಂದು ವಿಡಿಯೋದಲ್ಲಿ ಜಾಧವ್ ಹೇಳಿದ್ದಾರೆ. ನನ್ನ ಕಮಿಷನ್ ಹುದ್ದೆ ಹೋಗಲಾರದು. ನಾನು ಭಾರತೀಯ ನೌಕಾ ಪಡೆಯ ಕಮಿಶನ್ಡ್ ಅಧಿಕಾರಿ. ನಾನು ನನ್ನ ಪತ್ನಿ ಹಾಗೂ ತಾಯಿಯನ್ನು ಭೇಟಿಯಾದಾಗ, ಅವರ ಕಣ್ಣುಗಳಲ್ಲಿ ಭಯವಿತ್ತು, ಅವರು ಯಾಕೆ ಭಯಪಡಬೇಕು. ಏನಾದರೂ ನಡೆದಿದೆಯೇ, ಏನೋ ಸಂಭವಿಸಿದೆ. ಅವರ ಕಣ್ಣುಗಳಲ್ಲಿ ಭಯವಿರಬಾರದು ಎಂದು ಜಾಧವ್ ಹೇಳಿದ್ದಾರೆ. ಅವರಿಗೆ ಬೆದರಿಕೆ ಒಡ್ಡಲಾಗಿದೆ. ಅವರು ಹೊರಗೆ ಕಾಲಿಡುತ್ತಿದ್ದಾಗ ಭಾರತೀಯ ರಾಜತಾಂತ್ರಿಕರು ಗದರಿಸಿದ್ದಾರೆ. ಅವರು ಯಾಕೆ ಗದರಿಸಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಚಾರ ಕಾರ್ಯತಂತ್ರ, ವಿಶ್ವಾಸಾರ್ಹತೆ ಇಲ್ಲ: ಭಾರತ

 ವೀಡಿಯೊ ಕುರಿತಂತೆ ಇಸ್ಲಾಮಾಬಾದ್ ಅನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಭಾರತ, ಇದು ಪ್ರಚಾರದ ಕಾರ್ಯತಂತ್ರ. ಇದರಲ್ಲಿ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದಿದೆ. ಇದು ಆಶ್ಚರ್ಯಕರವಾಗಿಲ್ಲ. ವಿಡಿಯೋದ ಮೂಲಕ ಒತ್ತಾಯದ ಹೇಳಿಕೆ ನೀಡುವ ಅಭ್ಯಾಸವನ್ನು ಪಾಕಿಸ್ತಾನ ಮುಂದುವರಿಸಿದೆ. ಇಂತಹ ಪ್ರಚಾರದ ಕಾರ್ಯತಂತ್ರವನ್ನು ಅರಿತುಕೊಳ್ಳುವ ಸಮಯ ಇದು. ಇದರಲ್ಲಿ ಯಾವುದೇ ವಿಶ್ವಾಸಾರ್ಹತೆ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News