ರಾಜ್ಯಾದ್ಯಂತ ಎಸಿಬಿ ದಾಳಿ: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪಾಸ್ತಿ ವಶಕ್ಕೆ

Update: 2018-01-04 12:46 GMT

ಬೆಂಗಳೂರು, ಜ.4: ಬೆಸ್ಕಾಂ, ಬಿಬಿಎಂಪಿ, ಬಿಡಿಎ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ 12 ಅಧಿಕಾರಿಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ(ನೆಲಮಂಗಲ) ಸೇರಿದಂತೆ ರಾಜ್ಯದ ವಿವಿಧಡೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಕೋಟ್ಯಂತರ ವೌಲ್ಯದ ಆಸ್ತಿ ಪಾಸ್ತಿ ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ ಉಪವಿಭಾಗದ ಸಹಾಯಕ ಕಾರ್ಯದರ್ಶಿ ಜಿ.ಟಿ.ಕುಮಾರಸ್ವಾಮಿ, ಕೆಂಗೇರಿಯ ಬೆಸ್ಕಾಂ ಅಧೀಕ್ಷಕ ಅಭಿಯಂತರ ಎನ್.ಆರ್.ಎಂ.ನಾಗರಾಜನ್, ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಲಭ್ಯ ವಿಭಾಗದ ಅಧೀಕ್ಷಕ ಅಭಿಯಂತರ ಬಿ.ಎಸ್.ಪ್ರಹ್ಲಾದ, ಬಿಡಿಎ ನಗರ ಯೋಜನೆ ಉಪನಿರ್ದೇಶಕ ಆರ್.ವಿ.ಕಾಂತರಾಜ್, ಬಿಬಿಎಂಪಿ ಸಿ.ವಿ.ರಾಮನ್ ನಗರ ತೆರಿಗೆ ವೌಲ್ಯಮಾಪಕ ನರಸಿಂಹಲು, ನೆಲಮಂಗಲದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಖಾ ಸೇರಿದಂತೆ ರಾಜ್ಯದ ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ.

ರಾಯಚೂರಿನಲ್ಲಿ ದಾಳಿ: ಬಳ್ಳಾರಿ ಎಸಿಬಿ ಅಧಿಕಾರಿ ತಂಡ ಬೆಳಗ್ಗೆ ಇಲ್ಲಿನ ಗಂಗಾ ಪರಮೇಶ್ವರಿ ಕಾಲನಿಯಲ್ಲಿರುವ ನಗರಸಭೆ ಸ್ಯಾನಿಟರಿ ಇನ್ಸ್‌ಪೆಕ್ಟರ್ ಅಮರೇಶ ಚೆಂಚರಮರಡಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಆದಾಯಕ್ಕಿಂತ ಹೆಚ್ಚಿಗೆ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ವಿಜಯಪುರದಲ್ಲಿ ದಾಳಿ: ನಗರದ ಬಾರಾಕುಟ್ರಿ ತಾಂಡಾ ಬಳಿ ಇರುವ ಜಿಲ್ಲೆಯ ಜಿ.ಪಂ ಇಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕ ಸೋಮಪ್ಪ ಟಿ.ಲಮಾಣಿ ಮನೆ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಲಾಯಿತು.

ಗದಗದಲ್ಲಿ ದಾಳಿ: ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಗೌಡಪ್ಪ ಪಾಟೀಲ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಧಿಕೃತ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. 

ದಾವಣಗೆರೆಯಲ್ಲಿ ದಾಳಿ: ಬೆಸ್ಕಾಂನ ಎಇಇ ಜೆ.ಸಿ.ಜಗದೀಶಪ್ಪ ಅವರ ಶಿವಕುಮಾರ ಬಡಾವಣೆಯಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮೂರು ಮನೆಗಳು, ಧಾರವಾಡ, ತುಮಕೂರು ಹಾಗೂ ಬೆಂಗಳೂರಿನಲ್ಲಿ ತಲಾ 1 ಸೈಟ್ ಮತ್ತು ಹೊಸದುರ್ಗ ತಾಲೂಕು ಚಿಕ್ಕಮ್ಮನಹಳ್ಳಿಯಲ್ಲಿ 5 ಎಕರೆ ಜಮೀನು, ಹೊಳಲ್ಕೆರೆ ತಾಲೂಕು ಚಿಕ್ಕ ಜಾಜೂರಿನಲ್ಲಿ 20 ಎಕರೆ ಜಮೀನು ಸೇರಿದಂತೆ ಕೋಟ್ಯಂತರ ರೂ. ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಹಾಸನದಲ್ಲಿ ಲೋಕೋಪಯೋಗಿ ಇಲಾಖೆಯ ಸಕಲೇಶಪುರ ವಿಭಾಗದ ಎಇಇ ವೆಂಕಟೇಶ್ ಅವರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಅವರ ಬಳಿ ಅರ್ಧ ಕೆ.ಜಿ.ಗೂ ಅಧಿಕ ಚಿನ್ನ, ನಾಲ್ಕು ನಿವೇಶನದ ದಾಖಲೆ ಪತ್ರಗಳು ಸಿಕ್ಕಿವೆ. ಶಿವಮೊಗ್ಗದ ಕರ್ನಾಟಕ ನೀರಾವರಿ ನಿಗಮದ ಎಇಇ ಬಾಲಣ್ಣ ಅವರ ಭದ್ರಾವತಿ ಕಚೇರಿ, ಮನೆ ಹಾಗೂ ಹೊನ್ನಾವರ ಕರ್ಕಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News