ಉತ್ತರಾಖಂಡ : ಪ್ರಧಾನಿ ಮೋದಿ ಭಾವಚಿತ್ರ ತೂಗುಹಾಕಲು ನಿರಾಕರಿಸಿದ ಮದ್ರಸಾಗಳು

Update: 2018-01-05 09:47 GMT

ಡೆಹ್ರಾಡೂನ್,ಜ.5 : ಎಲ್ಲಾ ಸರಕಾರಿ ಶೈಕ್ಷಣಿಕ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ತೂಗು ಹಾಕಬೇಕೆಂಬ  ಉತ್ತರಾಖಂಡ ಸರಕಾರದ ಸೂಚನೆಯನ್ನು ರಾಜ್ಯದ ಮದ್ರಸಾಗಳು ಧಿಕ್ಕರಿಸಿವೆ. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ನಂತರ ನೀಡಲಾಗಿದ್ದ ಸೂಚನೆಯಲ್ಲಿ "ಎಲ್ಲಾ ಶೈಕ್ಷಣಿಕ ಸಂಸ್ಥೆಗಳು 2022ರೊಳಗಾಗಿ ಪ್ರಧಾನಿ ಮೋದಿಯ ಕನಸಿನಂತೆ ನವಭಾರತ ನಿರ್ಮಾಣಕ್ಕಾಗಿ ಪಣ ತೊಡಬೇಕೆಂದು ಹಾಗೂ ತಮ್ಮ ಸಂಸ್ಥೆಗಳಲ್ಲಿ ಪ್ರಧಾನಿಯ ಭಾವಚಿತ್ರ ತೂಗು ಹಾಕಬೇಕೆಂದು'' ಸೂಚನೆ ನೀಡಲಾಗಿತ್ತು. ಎಲ್ಲಾ ಸಂಸ್ಥೆಗಳೂ ಈ ಆದೇಶ ಜಾರಿ ಬಗ್ಗೆ  ಸರಕಾರಕ್ಕೆ ವರದಿ ನೀಡುವಂತೆಯೂ ಹೇಳಲಾಗಿತ್ತು.

ಸರಕಾರದ ಸೂಚನೆಯ ಬೆನ್ನಿಗೆ ಸಭೆ ಸೇರಿದ್ದ ಮದ್ರಸಾಗಳ ಪದಾಧಿಕಾರಿಗಳು ಈ ಸೂಚನೆಯನ್ನು ಧಾರ್ಮಿಕ ಕಾರಣಗಳಿಗಾಗಿ ಪಾಲಿಸದೇ ಇರಲು ನಿರ್ಧರಿಸಿದ್ದರು. ಈ ಸೂಚನೆ ಇಸ್ಲಾಂ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ. ಇಸ್ಲಾಂ ಧರ್ಮ ಮದ್ರಸಾದೊಳಗೆ ಯಾವುದೇ ಚಿತ್ರವನ್ನು ತೂಗುಹಾಕಲು ಅನುಮತಿಸದೇ ಇರುವುದರಿಂದ ಪ್ರಧಾನಿಯ ಭಾವಚಿತ್ರ ತೂಗು ಹಾಕುವ ಪ್ರಶ್ನಯೇ ಇಲ್ಲ ಎಂದು  ಸಭೆಯ ನಂತರ ಉತ್ತರಾಖಂಡ ಮದ್ರಸಾ ಶಿಕ್ಷಣ ಮಂಡಳಿಯ ಉಪ ರಿಜಿಸ್ಟ್ರಾರ್ ಹಾಜಿ ಅಖ್ಲಖ್ ಅಹ್ಮದ್ ತಿಳಿಸಿದ್ದರು.

ಮುಂದೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಎಲ್ಲಾ ಜಿಲ್ಲೆಗಳ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿ ಸರಕಾರದ ಆದೇಶ ಕಾರ್ಯಗತವಾಗುವಂತೆ ನೋಡಿಕೊಳ್ಳಲು ತಿಳಿಸಿದ್ದರೂ  ಮದ್ರಸಾಗಳು ಅದನ್ನು ಪಾಲಿಸುವ ಗೋಜಿಗೆ ಹೋಗಿಲ್ಲ. ಆದೇಶದ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಲಾಗಿದ್ದರೂ ಅದು ಯಾರದ್ದೇ ಧರ್ಮದ ವಿರುದ್ಧವಾಗಿದ್ದಲ್ಲಿ ಅವರನ್ನು ಬಲವಂತ ಪಡಿಸುವ ಹಾಗಿಲ್ಲ, ಎಂದು ಡೆಹ್ರಾಡೂನ್ ನ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News