ಅಲೆಮಾರಿಗಳಿಗೆ ‘ಸಾಲ ಸೌಲಭ್ಯ’ ಕಲ್ಪಿಸಲು ವಿಶೇಷ ಯೋಜನೆ: ಸಚಿವ ಆಂಜನೇಯ

Update: 2018-01-05 12:31 GMT

ಬೆಂಗಳೂರು, ಜ.5: ನೆಲೆ ಇಲ್ಲದ ದೇವದಾಸಿ ಹೆಣ್ಣು ಮಕ್ಕಳು, ಸುಡುಗಾಡು ಸಿದ್ಧರು, ದಕ್ಕಲಿಗರು, ಹಕ್ಕಿಪಿಕ್ಕಿಗಳು ಸೇರಿದಂತೆ ಅಲೆಮಾರಿಗಳಿಗೆ ಸೂರು, ಆರ್ಥಿಕ ಸಬಲತೆಗೆ ಸಾಲ ಸೌಲಭ್ಯ ಕಲ್ಪಿಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲೆ ಇರುವ 40ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳಿಗೆ ತಾವೂ ಪರಿಶಿಷ್ಟ ಜಾತಿಯೆಂಬ ಕಲ್ಪನೆಯೇ ಇಲ್ಲ, ಮೀಸಲಾತಿ ಸೌಲಭ್ಯವಿದೆ ಎಂಬುವುದೂ ಗೊತ್ತಿಲ್ಲ ಎಂದರು.

ಕನಿಷ್ಟ 5 ಲಕ್ಷ ರೂ.ನಿಂದ ಗರಿಷ್ಠ 10ಲಕ್ಷ ರೂ.ವರೆಗೆ ಅಲೆಮಾರಿ ಸಮುದಾಯಗಳ ಯುವಕ-ಯುವತಿಯರಿಗೆ ಅಂಬೇಡ್ಕರ್ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದರು ಅವರು, ಮೊಟ್ಟ ಮೊದಲ ಬಾರಿಗೆ ಅಲೆಮಾರಿಗಳಿಗೆ ನೇರ ಸಾಲ ನೀಡಲಾಗುವುದು ಎಂದರು.
ಅಸ್ಪಶ್ಯರಲ್ಲೆ ಅಸ್ಪಶ್ಯರಾಗಿರುವ ಅಲೆಮಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಆ ಸಮುದಾಯಗಳನ್ನು ಆರ್ಥಿಕವಾಗಿ ಸದೃಢಗೊಳಿಸಲಾಗುವುದು ಎಂದ ಅವರು, ನಿಗಮಗಳ ಮೂಲಕ ನೀಡುವ ಸಾಲದಲ್ಲಿ ಶೇ.50ರಷ್ಟು ಹಣವನ್ನು ಸರಕಾರ ಸಬ್ಸಿಡಿ ರೂಪದಲ್ಲಿ ನೀಡಲಿದೆ ಎಂದು ತಿಳಿಸಿದರು.

ಸುಡುಗಾಡು ಸಿದ್ಧರು, ದಕ್ಕಲಿಗರು, ಹಕ್ಕಿಪಿಕ್ಕಿಗಳು ಸೇರಿ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಆದರೆ, ಮೀಸಲಾತಿ ಸೌಲಭ್ಯ ಕೇವಲ ಹೊಲೆಯ, ಮಾದಿಗ, ಭೋವಿ, ಲಂಬಾಣಿ ಸಮುದಾಯಗಳಷ್ಟೆ ಪಡೆಯುತ್ತಿವೆ. ಹೀಗಾಗಿ ಮೀಸಲಾತಿ ಸೌಲಭ್ಯ ಎಲ್ಲ ಸಮುದಾಯಗಳಿಗೆ ಸಿಗಬೇಕು ಎಂದರು.
ರಾಜ್ಯದಲ್ಲಿ 40 ಜಾತಿಗಳನ್ನು ಅಲೆಮಾರಿಗಳೆಂದು ಗುರುತಿಸಿದ್ದು, 1ಲಕ್ಷ ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ. ಮನೆ, ಕೃಷಿಗಾಗಿ ಭೂಮಿ, ವಾಹನ, ವ್ಯಾಪಾರಕ್ಕೆ ತೊಡಗುವವರಿಗೆ ಸಾಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಿದ್ಯಾಸಿರಿ ಹೆಚ್ಚ: ಹಾಸ್ಟೆಲ್ ಪ್ರವೇಶ ದೊರೆಯದ ವಿದ್ಯಾರ್ಥಿಗಳಿಗಾಗಿ ‘ವಿದ್ಯಾಸಿರಿ’ ಯೋಜನೆಯಡಿ 1ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಯೋಜನೆಯಡಿ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಿಂದಲೇ ನನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದು, ಮುಂದಿನ ಚುನಾವಣೆಯಲ್ಲಿಯೂ ಅದೇ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನನ್ನ ಕೆಲ ಬೆಂಬಲಿಗರು ನೆಲಮಂಗಲ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮನವಿ ಮಾಡಿದ್ದಾರೆ. ಆದರೆ, ತಾನು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News