ಆಧಾರ್ ಕುರಿತಂತೆ ಹೆಚ್ಚುತ್ತಿರುವ ಅಪನಂಬಿಕೆ

Update: 2018-01-05 18:45 GMT

ಆಧಾರ್ ಈ ದೇಶದ ಜನರನ್ನು, ಸರಕಾರವನ್ನು ಬೆಸೆಯುತ್ತದೆ ಎಂದು ನಮ್ಮ ನಾಯಕರು ಜನರನ್ನು ನಂಬಿಸಲು ಯತ್ನಿಸುತ್ತಿದ್ದಾರೆ. ಪಾರದರ್ಶಕತೆ ಹೆಚ್ಚುತ್ತದೆ, ಮೋಸ, ವಂಚನೆಯನ್ನು ತಡೆಯಬಹುದು, ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ತಲುಪಿಸಲು ಅನುಕೂಲವಾಗುತ್ತದೆ ಎಂದು ಹೇಳಿ, ಜನರ ಮೇಲೆ ಸರಕಾರ ಹಂತ ಹಂತವಾಗಿ ಆಧಾರ್‌ನ್ನು ಹೇರುತ್ತಾ ಬರುತ್ತಿದೆ. ಆಧಾರ್ ಸಿಂಧುತ್ವ ವಿಚಾರಣೆ ಇನ್ನೂ ನ್ಯಾಯಾಲದಲ್ಲಿದೆಯಾದರೂ, ಅಧಿಕಾರಿಗಳನ್ನು ಬಳಸಿಕೊಂಡು ಒಳಗೊಳಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಲು ಸರಕಾರ ಹೊರಟಿದೆ. ನ್ಯಾಯಾಲಯಕ್ಕೆ ಒಂದು ಹೇಳಿಕೆ ನೀಡಿದರೆ, ಇತ್ತ ತಳಸ್ತರದಲ್ಲಿ ಗುಟ್ಟಾಗಿ ಬೇರೆ ಬೇರೆ ಕೆಲಸ ಕಾರ್ಯಗಳಿಗೆ, ಸಾಮಾಜಿಕ ಯೋಜನೆಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸುತ್ತಾ ಹೋಗುತ್ತಿದೆ. ಆಧಾರ್ ಜೋಡಣೆಗೆ ನ್ಯಾಯಾಲಯ ಸಮಯವನ್ನು ವಿಸ್ತರಿಸಿದೆಯಾದರೂ ಇತ್ತ ಆಧಾರ್ ಜನರ ಬದುಕಿನ ಆಧಾರವನ್ನು ಅಲುಗಾಡಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ.

ಹರ್ಯಾಣ, ದಿಲ್ಲಿ, ಉತ್ತರ ಪ್ರದೇಶಗಳಲ್ಲಿ ಆಧಾರ್ ಹೊಂದದವರಿಗೆ ರೇಷನ್ ನಿರಾಕರಿಸಿದ ಪರಿಣಾಮವಾಗಿ ಹಲವರು ಮೃತಪಟ್ಟಿರುವ ಘಟನೆಗಳು ವರದಿಯಾದವು. ಒಬ್ಬನಿಗೆ ಬಿಪಿಎಲ್ ಕಾರ್ಡ್ ಕೊಡುವುದೇ ಆತ ಈ ದೇಶದ ಅಧಿಕೃತ ಪ್ರಜೆ ಎನ್ನುವ ದಾಖಲೆಗಳು ಸಿಕ್ಕಿದ ಬಳಿಕ. ಬಿಪಿಎಲ್ ಕಾರ್ಡ್‌ನ್ನು ಹೊಂದಿದವರ ಆರ್ಥಿಕ ಮಟ್ಟ ಹೇಗಿರುತ್ತದೆ ಎನ್ನುವುದು ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ತಿಳಿಯದ್ದೇನಲ್ಲ. ಬದುಕುವುದಕ್ಕೆ ರೇಷನ್ ಅಕ್ಕಿಯನ್ನೇ ನೆಚ್ಚಿಕೊಂಡವರು ಇವರು. ಒಂದು ವೇಳೆ ರೇಷನ್ ಅಕ್ಕಿ ಇವರಿಗೆ ಪೂರೈಕೆಯಾಗದೇ ಇದ್ದರೆ ಹಸಿವೇ ಗತಿ. ಆಧಾರ್ ಕಾರ್ಡ್ ಇಲ್ಲವೆಂದು ಅಕ್ಕಿ ವಿತರಣೆಯನ್ನು ನಿಲ್ಲಿಸಿದ ಸಿಬ್ಬಂದಿಗೆ, ಅಧಿಕಾರಿಗಳಿಗೆ ಇದು ತಿಳಿಯದ ವಿಷಯವೇನೂ ಅಲ್ಲ.ಆಧಾರ್ ಕಾರ್ಡ್ ಇಲ್ಲ ಎಂದಾಕ್ಷಣ ಇವರು ಈ ದೇಶದ ಪ್ರಜೆಯಲ್ಲ, ಬದುಕುವ ಹಕ್ಕು ಇವರಿಗಿಲ್ಲ ಎಂದಾಗುತ್ತದೆಯೇ? ಆಧಾರ್ ಕಾರ್ಡ್ ಹೊಂದುವವರೆಗೆ ಇವರು ಏನನ್ನು ತಿಂದು ಬದುಕಬೇಕು? ಇಷ್ಟು ಪರಿಜ್ಞಾನವೂ ಇಲ್ಲದ ಸಿಬ್ಬಂದಿ ಆಧಾರ್ ಇಲ್ಲದ ಈ ಬಡ ಕುಟಂಬದ ಸದಸ್ಯರನ್ನು ಅಕ್ಷರಶಃ ಕೊಂದು ಹಾಕಿದರು. ಇದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ ಈ ಪ್ರಕರಣವನ್ನು ಸರಕಾರ ಒಪ್ಪುವುದಕ್ಕೆ ಸಿದ್ಧವಿಲ್ಲ. ಹರ್ಯಾಣದಲ್ಲಿ ಇದಕ್ಕಿಂತಲೂ ಹೃದಯವಿದ್ರಾವಕ, ಅಮಾನವೀಯ ಘಟನೆ ಆಧಾರ್ ಹೆಸರಿನಲ್ಲಿ ಸಂಭವಿಸಿತು. ಸೋನಿಪತ್‌ನ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರನ್ನು ಆಧಾರ್ ಇಲ್ಲ ಎನ್ನುವ ಕಾರಣಕ್ಕಾಗಿ ದಾಖಲಿಸಲು ಹಿಂದೇಟು ಹಾಕಲಾಯಿತು. ಪರಿಣಾಮವಾಗಿ ಮಹಿಳೆ ಮೃತಪಟ್ಟರು. ಕ್ಯಾನ್ಸರ್ ಪೀಡಿತ ಮಹಿಳೆ ಹುತಾತ್ಮ ಯೋಧನ ಪತ್ನಿಯಾಗಿದ್ದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಈಕೆಯ ಪತಿ ಹವಾಲ್ದಾರ್ ಲಕ್ಷ್ಮಣ್ ದಾಸ್ ಮೃತಪಟ್ಟಿದ್ದರು. ಕನಿಷ್ಠ ಒಬ್ಬ ಹುತಾತ್ಮ ಯೋಧನ ಪತ್ನಿ ಎನ್ನುವ ನೆಲೆಯಲ್ಲಾದರೂ ಆಸ್ಪತ್ರೆ ಆಕೆಯನ್ನು ದಾಖಲಿಸಿಕೊಳ್ಳಬೇಕಾಗಿತ್ತು.

ಆಧಾರ್ ಇಲ್ಲ ಎಂದಾಕ್ಷಣ ಈಕೆಯೇನು ಅಕ್ರಮ ನುಸುಳುಕೋರಳೇ? ಪಾಕಿಸ್ತಾನದಿಂದ ಬಂದವಳೇ? ಈಕೆಯನ್ನು ಆಸ್ಪತ್ರೆಗೆ ದಾಖಲಿಸದೇ ಇರುವ ಮೂಲಕ, ಒಬ್ಬ ಯೋಧನ ಪ್ರಾಣ ತ್ಯಾಗವನ್ನೇ ವೈದ್ಯರು ಅವಮಾನಿಸಿದರು. ಇದೆಲ್ಲದಕ್ಕೂ ಕಾರಣ ಆಧಾರ್ ಎಂಬ ಭ್ರಮೆ. ಇಂತಹದೊಂದು ಅನಾಹುತಕ್ಕೆ ಕಾರಣವಾದ ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಈವರೆಗೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೀಗ ಆಧಾರ್ ಮತ್ತೆ ಸುದ್ದಿಯಾಗಿದೆ. ಯಾವ ಆಧಾರ್‌ನ ಕುರಿತಂತೆ ಭ್ರಾಮಕವಾದ ಚಿತ್ರಣವೊಂದನ್ನು ಸರಕಾರ ನೀಡಿತೋ ಆ ಆಧಾರ್‌ನ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಈ ಹಿಂದೆ, ಆಧಾರ್ ಮಾಹಿತಿಗಳನ್ನು ಅಮೆರಿಕದಂತಹ ದೇಶಗಳ ಗುಪ್ತಚರ ಇಲಾಖೆಗಳು ಬಳಸಿಕೊಳ್ಳುತ್ತವೆ ಎಂದು ಆರೋಪಿಸಲಾಗಿತ್ತು. ಇದೀಗ ನೋಡಿದರೆ ಬರೇ 500 ರೂಪಾಯಿಗೆ ಯಾರದೇ ಆಧಾರ್ ಮಾಹಿತಿಗಳು ಲಭ್ಯ ಎನ್ನುವ ಅಂಶವನ್ನು ‘ದಿ ಟ್ರಿಬ್ಯೂನ್’ ತನ್ನ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ ಪಡಿಸಿದೆ. ಆಧಾರ್‌ನಲ್ಲಿ ನೀಡುವ ಪ್ರತೀ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂಬ ಭರವಸೆಯನ್ನು ಸರಕಾರ ಈಗಾಗಲೇ ನೀಡಿತ್ತು. ಆದರೆ ಅವೆಲ್ಲ ಹುಸಿಯಾಗುವಂತೆ ಬರೇ 500 ರೂಪಾಯಿಗೆ ಮಾಹಿತಿಗಳು ಬಿಕರಿಯಾಗುತ್ತಿವೆ. ‘ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರರೊಬ್ಬರು ಆಧಾರ್ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಮಾರಾಟ ಮಾಡುವ ಅಜ್ಞಾತ ಮಾರಾಟಗಾರರೊಬ್ಬನನ್ನು ಸಂಪರ್ಕಿಸಿದ್ದರು. ಇದ್ದಕ್ಕಾಗಿ ಆತನಿಗೆ ಪೇಟಿಎಂ ಮೂಲಕ 500 ರೂ.ಯನ್ನೂ ಪಾವತಿಸಿದ್ದರು. ಇಂತಹ ಒಂದು ಲಕ್ಷಕ್ಕೂ ಅಧಿಕ ಅಕ್ರಮಗಳು ನಡೆದಿರುವುದು ಇದೀಗ ಬಹಿರಂಗವಾಗಿದೆ.

ಈ ಉಲ್ಲಂಘನೆಯನ್ನು ಅಧಿಕಾರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ದೂರನ್ನೂ ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಗ್ಯಾಸ್ ಸಿಲಿಂಡರ್‌ಗಳ ಸಬ್ಸಿಡಿಗಳನ್ನು ತಮ್ಮ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿಕೊಂಡ ಕಾರಣದಿಂದ ಏರ್‌ಟೆಲ್ ಪೇಟಿಎಂ ಸುದ್ದಿಯಾಗಿತ್ತು. ಗ್ರಾಹಕರ ಆಧಾರ್ ಜೋಡಣೆಯನ್ನು ಮಾಡಿಸಿಕೊಂಡ ಏರ್‌ಟೆಲ್ ಸಂಸ್ಥೆ, ಬ್ಯಾಂಕ್ ಖಾತೆಗಳಿಗೆ ಬೀಳುತ್ತಿದ್ದ ಸಬ್ಸಿಡಿ ಹಣವನ್ನು ಗ್ರಾಹಕರ ಅನುಮತಿ ಇಲ್ಲದೆಯೇ ತನ್ನ ಪೇಟಿಎಂಗೆ ವರ್ಗಾಯಿಸಿತ್ತು. ಈ ಕುರಿತಂತೆ ಗ್ರಾಹಕರೊಬ್ಬರು ದೂರು ಸಲ್ಲಿಸಿದ ಬಳಿಕ, ಸರಕಾರ ಏರ್‌ಟೆಲ್ ವಿರುದ್ಧ ಕ್ರಮ ತೆಗೆದುಕೊಂಡಿತ್ತು. ‘ದಿ ಟ್ರಿಬ್ಯೂನ್’ ಕುಟುಕು ಕಾರ್ಯಾಚರಣೆಯಲ್ಲಿ ಆಧಾರ್ ಮಾಹಿತಿ ಸೋರಿಕೆಯನ್ನು ಬಹಿರಂಗ ಪಡಿಸಿದ ಬೆನ್ನಿಗೇ, ಅಮೆರಿಕದ ಖ್ಯಾತ ಮಾಹಿತಿದಾರ (ವಿಸಲ್ ಬ್ಲೋವರ್) ಸ್ನೋಡೆನ್ ಅವರು ಆಧಾರ್ ದತ್ತಾಂಶಗಳ ಕಳವು ಮತ್ತು ದುರ್ಬಳಕೆ ಸಾಧ್ಯ ಎಂಬ ಅಂಶವನ್ನು ಹೇಳಿದ್ದಾರೆ. ಆಧಾರ್ ಮಾಹಿತಿ ಕೋಶದ ಯಾವುದೇ ಉಲ್ಲಂಘನೆ ಅಸಾಧ್ಯ ಎಂದು ಯುಐಡಿಎಐ ಹೇಳಿದ ಬೆನ್ನಿಗೇ ಸ್ನೋಡನ್ ಹೇಳಿಕೆ ಹೊರಬಿದ್ದಿದೆ. ಭಾರತವು ಸುಮಾರು 1.2 ಶತಕೋಟಿ ಪ್ರಜೆಗಳ ಮಾಹಿತಿಗಳನ್ನೊಳಗೊಂಡಿರುವ ಆಧಾರ್ ಮಾಹಿತಿ ಕೋಶವನ್ನು ಹೊಂದಿದೆ. ಆದರೆ ಅಡ್ಮಿನ್ ಖಾತೆಗಳನ್ನು ಸೃಷ್ಟಿಸಬಹುದಾಗಿದೆ ಮತ್ತು ಅದನ್ನು ತನಗೆ ಬೇಕಾದವರಿಗೆ ಮಾರಾಟ ಮಾಡಬಹುದು ಎನ್ನುವ ಅಂಶವನ್ನು ಈಗಾಗಲೇ ಇನ್ನೋರ್ವ ವಿದೇಶಿ ಪತ್ರಕರ್ತ ಸ್ಪಷ್ಟಪಡಿಸಿದ್ದಾರೆ. ಖಾಸಗಿತನದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಆಧಾರ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗಲೇ ಇಂತಹ ಹೇಳಿಕೆಗಳು ಹೊರ ಬೀಳುತ್ತಿರುವುದರಿಂದ ನ್ಯಾಯಾಲಯದ ತೀರ್ಪಿನಲ್ಲಿ ತನ್ನ ಪರಿಣಾಮಗಳನ್ನು ಖಂಡಿತಾ ಬೀರಬಹುದಾಗಿದೆ.

ಆದುದರಿಂದಲೇ, ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ಆಧಾರ್ ಜೋಡಣೆಯ ಕುರಿತಂತೆ ಒತ್ತಡಗಳನ್ನು ಹೇರದಂತೆ ಸರಕಾರ ಸೂಚನೆ ನೀಡಬೇಕಾಗಿದೆ. ಹಾಗೆ ಒತ್ತಡ ಹೇರಿದ ಬಗ್ಗೆ ಸಾಕ್ಷಗಳಿದ್ದರೆ ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಖ್ಯವಾಗಿ ಸಾಮಾಜಿಕ ವಲಯದಲ್ಲಿ ಆಧಾರ್‌ನ್ನು ನಿರ್ಬಂಧಿಸಿದರೆ ಅದು ನೇರವಾಗಿ ಶ್ರೀಸಾಮಾನ್ಯನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಯಾವುದೇ ಇಲಾಖೆಗಳು ಆಧಾರ್ ಇಲ್ಲದವನನ್ನು ವಿದೇಶಿಯೆಂಬಂತೆ ನೋಡುವುದನ್ನು ನಿಲ್ಲಿಸಬೇಕು. ಈಗಾಗಲೇ ಜನಸಾಮಾನ್ಯರಲ್ಲಿ ಮತದಾನದ ಗುರುತು ಪತ್ರಗಳಿವೆ. ಜೊತೆಗೆ ಪೂರಕವಾಗಿ ಬೇರೇ ಬೇರೆ ಗುರುತು ಚೀಟಿಗಳಿವೆ. ಹೀಗಿದ್ದರೂ ಆಧಾರ್‌ಗಾಗಿ ಅವಸರಿಸುವುದು ನೋಡಿದರೆ ಸರಕಾರ ಉದ್ದೇಶಪೂರ್ವಕವಾಗಿಯೇ ಜನರ ಮೇಲೆ ಒತ್ತಡ ಹೇರುತ್ತಿದೆಯೋ ಎಂಬ ಅನುಮಾನ ಕಾಡುತ್ತದೆ. ಆಧಾರ್ ದುರ್ಬಳಕೆಯ ಕುರಿತಂತೆ ಈವರೆಗೆ ಸ್ಪಷ್ಟೀಕರಣ ನೀಡಲು ಸಾಧ್ಯವಾಗದ ಸರಕಾರಕ್ಕೆ, ಜನರ ಖಾಸಗಿ ಮಾಹಿತಿಗಳನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವ ಯಾವ ನೈತಿಕ ಅಧಿಕಾರವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News