ಆಪರೇಷನ್ 200% ಸೇಫ್.. ಮಹಿಳೆ ಸ್ಥಿತಿ ಏನಾಯ್ತು ಗೊತ್ತೇ ?

Update: 2018-01-08 04:45 GMT

ಮುಂಬೈ, ಜ. 8: ವೈದ್ಯರು "ಶೇಕಡ 200ರಷ್ಟು ಸುರಕ್ಷಿತ" ಎಂದು ಭರವಸೆ ನೀಡಿದ ಬಳಿಕ 43 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ವಿಫಲವಾಗಿ ಮಹಿಳೆ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಹಿಂದುಜಾ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದ್ದು, 56 ವರ್ಷದ ಮಹಿಳೆ ಮಂಜು ಮೃತಪಟ್ಟಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮಿಥುಲಾಲ್ ಬಾಫ್ನಾ ಕಷ್ಟಪಟ್ಟು 43 ಲಕ್ಷ ರೂಪಾಯಿ ಸಂಗ್ರಹಿಸಿ ಪತ್ನಿಯ ಜೀವ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಇದೀಗ ಮಹಾರಾಷ್ಟ್ರ ವೈದ್ಯಕೀಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

"ಟ್ರಾನ್ಸ್‌ಕೆಥೆಟರ್ ಮಿಟ್ರಲ್ ವಾಲ್ವ್ ರಿಪೇರಿ ವ್ಯವಸ್ಥೆ ಶೇಕಡ 200ರಷ್ಟು ಸುರಕ್ಷಿತ ಎಂದು ವೈದ್ಯರು ಭರವಸೆ ನೀಡಿದ್ದರು. ಐದು ದಿನದಲ್ಲಿ ಮನೆಗೆ ವಾಪಸ್ಸಾಗಬಹುದು ಎಂದು ಭರವಸೆ ನೀಡಿದ್ದರು. ಬದಲಾಗಿ ಸುಮಾರು 60 ದಿನಗಳ ಬಳಿಕ ಕೋಮಾಸ್ಥಿತಿಯಲ್ಲಿ ಮನೆಗೆ ಕರೆದೊಯ್ಯಲು ಸೂಚಿಸಿದರು.

ಡಿಸೆಂಬರ್ 19ರಂದು ಆಸ್ಪತ್ರೆಯಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್‌ನಲ್ಲಿ ಮೃತಪಟ್ಟಳು" ಎಂದು ಬಾಫ್ನಾ ದೂರು ನೀಡಿದ್ದಾರೆ. ಆದರೆ ಮಾನವೀಯತೆ ಆಧಾರದಲ್ಲಿ 12.47 ಲಕ್ಷ ರೂಪಾಯಿಯನ್ನು ಆಸ್ಪತ್ರೆ ಮರುಪಾವತಿ ಮಾಡಿದೆ ಎಂದು ಆಸ್ಪತ್ರೆ ಸಮರ್ಥಿಸಿಕೊಂಡಿದೆ.

ದೇಶದಲ್ಲಿ ಗಗನಮುಖಿಯಾಗಿರುವ ಆರೋಗ್ಯ ಸೇವಾ ವೆಚ್ಚ ಹಾಗೂ ವೈದ್ಯರು- ರೋಗಿ ನಡುವಿನ ಸಂಬಂಧ ಹದಗೆಡುತ್ತಿರುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ.

"ಅಪಾಯ ಸಾಧ್ಯತೆ ಬಗ್ಗೆ ವೈದ್ಯರು ಏನನ್ನೂ ಹೇಳಿಲ್ಲ. ಜೈಪುರದಿಂದ ಬಂದ ಟ್ರಾನ್ಸ್‌ಕೆಥೆಟರ್ ಶಸ್ತ್ರಚಿಕಿತ್ಸೆ ನಿರ್ವಹಿಸುವ ಡಾ.ರವೀಂದ್ರ ಸಿಂಗ್ ರಾವ್, ಮೊದಲು ನಮ್ಮನ್ನು ಭೇಟಿ ಮಾಡಲೇ ಇಲ್ಲ. ಆಮದು ಮಾಡಿಕೊಂಡ ಈ ವಾಲ್ವ್‌ನ ವೆಚ್ಚ 1.5 ಲಕ್ಷ ಎಂದು ಮಾರಾಟ ಪತ್ರದಿಂದ ತಿಳಿದುಬರುತ್ತದೆ. ಆದರೆ ಆಸ್ಪತ್ರೆ ಅದಕ್ಕೆ 11 ಲಕ್ಷ ರೂಪಾಯಿ ವಿಧಿಸಿದೆ" ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೆ ಸುಮಾರು 20 ಲಕ್ಷ ವೆಚ್ಚವಾಗಬಹುದು ಎಂದು ಹೇಳಿದ್ದರು. ಆದರೆ ಒಟ್ಟು 43 ಲಕ್ಷ ರೂ. ವೆಚ್ಚವಾಗಿದೆ ಎಂದು ವಿವರಿಸಿದ್ದಾರೆ. ಅಪಾಯ ಸಾಧ್ಯತೆ ಇದೆ ಎಂದು ವೈದ್ಯರು ಮೊದಲೇ ತಿಳಿಸಿದ್ದರೆ, ಇದಕ್ಕೆ ಒಪ್ಪಿಗೆ ನೀಡುತ್ತಲೇ ಇರಲಿಲ್ಲ. ಬದಲಾವಣೆ ತುರ್ತು ಅಗತ್ಯವೂ ಆಗಿರಲಿಲ್ಲ ಎಂದು ಬಾಫ್ನಾ ವಿವರಿಸಿದ್ದಾರೆ.

ಆದರೆ ಚಿಕಿತ್ಸೆ ನೀಡಿದ ವೈದ್ಯರು ಇದನ್ನು ನಿರಾಕರಿಸಿದ್ದಾರೆ. ಆರು ತಿಂಗಳ ಹಿಂದೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಹಾಗೂ ಬದುಕಿ ಉಳಿಯುವ ಸಾಧ್ಯತೆ ಕೇವಲ ಆರು ತಿಂಗಳು ಎಂದು ಸ್ಪಷ್ಟಪಡಿಸಲಾಗಿತ್ತು. ಇದರಲ್ಲಿ ಯಾವ ನಿರ್ಲಕ್ಷ್ಯವೂ ಆಗಿಲ್ಲ. ವಾಲ್ವ್ ನಿಯೋಜಿಸಲು ವಿಫಲವಾಗಿದ್ದು ನಿಜ. ಆದರೆ ಯಾಂತ್ರಿಕ ವಾಲ್ವ್ ಅಳವಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದರು ಎನ್ನುವುದು ಅವರ ಸಮರ್ಥನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News