ಬಿಜೆಪಿಯ ಆರ್. ಅಶೋಕ್ ವಿರುದ್ಧ ಎಫ್‌ಐಆರ್

Update: 2018-01-09 11:15 GMT

ಬೆಂಗಳೂರು, ಜ.9: ಅಕ್ರಮವಾಗಿ ಭೂ-ಮಂಜೂರಾತಿ ಮಾಡಿರುವ ಆರೋಪದ ಮೇಲೆ ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್ ವಿರುದ್ಧ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್ ದಾಖಲು ಮಾಡಿದೆ.

ಬೆಂಗಳೂರು ನಗರ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಆರ್. ಅಶೋಕ್ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ಹಾಗೂ ಕಲಂ 420, 120 (ಬಿ) ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

1998 ರಿಂದ 2006 ಅವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಭೂ-ಸಕ್ರಮೀಕರಣ ಸಮಿತಿ ಅಧ್ಯಕ್ಷ ಹಾಗೂ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವೇಳೆ ಆರ್. ಅಶೋಕ್, ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿರುವ ಬಗ್ಗೆ ಎಸಿಬಿಗೆ ದೂರು ಬಂದಿತ್ತು ಎನ್ನಲಾಗಿದೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ದಕ್ಷಿಣ ತಾಲೂಕಿನ ಅಂದಿನ ತಹಶೀಲ್ದಾರ್ ರಾಮಚಂದ್ರಯ್ಯ, ಕಂದಾಯ ನಿರೀಕ್ಷರಾದ ಗವಿಗೌಡ, ಚೌಡರೆಡ್ಡಿ, ಗ್ರಾಮಲೆಕ್ಕಿಗ ಶಶಿಧರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News