ಸ್ಕೈಯಿಂಗ್: ಭಾರತಕ್ಕೆ ಚೊಚ್ಚಲ ಅಂತಾರಾಷ್ಟ್ರೀಯ ಪದಕ ಗೆದ್ದುಕೊಟ್ಟ ಅಂಚಲ್ ಠಾಕೂರ್

Update: 2018-01-10 06:31 GMT

ಚಂಡೀಗಡ, ಜ.10: ಸ್ಕೈಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಬಾರಿ ಅಂತಾರಾಷ್ಟ್ರೀಯ ಪದಕ ಗೆದ್ದುಕೊಟ್ಟಿರುವ ಮನಾಲಿಯ ಅಂಚಲ್ ಠಾಕೂರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

21ರ ಹರೆಯದ ಅಂಚಲ್ ಟರ್ಕಿಯಲ್ಲಿ ಮಂಗಳವಾರ ನಡೆದ ಅಲ್ಪೈನ್ ಎಜ್ದೆರ್ 3200 ಕಪ್ ಟೂರ್ನಿಯಲ್ಲಿ ಸ್ಲೊಮ್‌ರೇಸ್ ವಿಭಾಗದಲ್ಲಿ ಕಂಚು ಜಯಿಸಿದರು.

‘‘ದೀರ್ಘ ಸಮಯದ ತರಬೇತಿ ಕೊನೆಗೂ ಫಲ ನೀಡಿದೆ. ನಾನು ಉತ್ತಮ ಆರಂಭ ಪಡೆದ ಕಾರಣ ಮುನ್ನಡೆ ಪಡೆಯಲು ಸಾಧ್ಯವಾಗಿದೆ. ಮುನ್ನಡೆಯ ಫಲವಾಗಿ ಮೂರನೇ ಸ್ಥಾನ ಪಡೆದಿದ್ದೇನೆ’’ ಎಂದು ಅಂಚಲ್ ಹೇಳಿದ್ದಾರೆ.

ಭಾರತದಲ್ಲಿ ಚಳಿಗಾಲದ ಕ್ರೀಡೆಯ ಸಂಸ್ಕೃತಿಯಾಗಲಿ ಅಥವಾ ಮೂಲಭೂತ ಸೌಕರ್ಯವಾಗಲಿ ಇಲ್ಲದ ಕಾರಣ ಅಂಚಲ್ ಅವರ ಸಾಧನೆ ವಿಶೇಷ ಮಹತ್ವ ಪಡೆದಿದೆ. ವಿಂಟರ್ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸಲು ಆಸಕ್ತಿಯಿರುವವರ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ನಿರ್ಲಕ್ಷ ಧೋರಣೆ ತಳೆಯುತ್ತಿದೆ.

‘‘ಇದು ಭಾರತದ ಕ್ರೀಡೆಗೆ ಹೊಸ ದಿಕ್ಕು ನೀಡಲಿದ್ದು, ಸ್ಕೈಯಿಂಗ್ ಸಮುದಾಯದಲ್ಲಿ ಇದೊಂದು ಹೆಮ್ಮೆಯ ಸಾಧನೆ’’ ಎಂದು ಅಂಚಲ್ ಅವರ ತಂದೆ, ಭಾರತದ ವಿಂಟರ್ ಗೇಮ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ರೋಶನ್ ಠಾಕೂರ್ ಹೇಳಿದ್ದಾರೆ.

ಅಂಚಲ್ ತನ್ನ ತಂದೆಯ ಆರ್ಥಿಕ ಸಹಾಯದಿಂದಲೇ ಸ್ಕೈಯಿಂಗ್‌ನಲ್ಲಿ ಸಾಧನೆ ಮಾಡಿದ್ದು, ಕೇಂದ್ರ ಸರಕಾರ ಈತನಕ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಅಂಚಲ್‌ಗೆ ಸ್ಕೈಯಿಂಗ್ ಸಲಕರಣೆ ಖರೀದಿಗೆ 5 ರಿಂದ 10 ಲಕ್ಷ ರೂ. ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News