ಬಾರ್‌ನಲ್ಲಿ ಅಗ್ನಿ ಅವಘಡ ಪ್ರಕರಣ: ಕಲಾಸಿಪಾಳ್ಯ ಇನ್ಸ್‌ಪೆಕ್ಟರ್ ಅಮಾನತು

Update: 2018-01-11 06:04 GMT

ಬೆಂಗಳೂರು, ಜ.11: ಇತ್ತೀಚೆಗೆ ಕಲಾಸಿಪಾಳ್ಯದ ಕೈಲಾಶ್ ಬಾರ್ ನಲ್ಲಿ ನಡೆದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ  ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಹಕಾರಿ ಕಾಯ್ದೆಯಲ್ಲಿನ ನಿಯಮಾವಳಿಗಳನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ಈ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

ಜ.8ರಂದು ಮುಂಜಾವ ಕಲಾಸಿಪಾಳ್ಯದ ಕೈಲಾಸ್ ಬಾರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದರು. ಘಟನೆ ನಡೆದ ದಿನ ಖುದ್ದು ಗೃಹಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವಿಶೇಷ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಪಶ್ಚಿಮ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ಗೆ ಆದೇಶಿಸಿದ್ದರು

ಮದ್ಯ ಮಾರಾಟದ ವೇಳೆ, ಮದ್ಯ ಬಾಟಲ್ ಮಾರಾಟ ಹಾಗೂ ಸಿಎಲ್-9ರಲ್ಲಿನ ಷರತ್ತುಗಳನ್ನು ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಜಾರಿಗೊಳಿಸುವಲ್ಲಿ ವಿಫಲರಾಗಿರುವುದಾಗಿ ಡಿಸಿಪಿ ವರದಿಯಲ್ಲಿ ಉಲ್ಲೇಖಿಸಿದ್ದರು.

ಅಲ್ಲದೆ ಕೈಲಾಸ್ ಬಾರ್ ನಲ್ಲಿ ತಡರಾತ್ರಿವರೆಗೂ ಮದ್ಯ ಪೂರೈಕೆ ಮಾಡಲಾಗುತ್ತೆ  ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಮದ್ಯ ಮಾರಾಟ ಆರಂಭವಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು.  ಈ ಎಲ್ಲಾ ಕಾರಣಗಳಿಂದ ಇನ್ಸ್‌ಪೆಕ್ಟರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News