ಕೇಂದ್ರ ಸರಕಾರದಿಂದ ರಾಜ್ಯದ ಸಚಿವರ, ಶಾಸಕರ ದೂರವಾಣಿ ಕದ್ದಾಲಿಕೆ: ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪ

Update: 2018-01-11 12:40 GMT

ಬೆಂಗಳೂರು, ಜ. 11: ರಾಜ್ಯದ ಪ್ರಮುಖ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್‌ಬಹುದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆಯ ಬಗ್ಗೆ ಬಹಳ ಹಿಂದೆಯೇ ಹೇಳಿದ್ದೆ ಎಂದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ಕಾನೂನು ಪ್ರಕಾರ ಯಾರೊಬ್ಬರ ದೂರವಾಣಿ ಕದ್ದಾಲಿಸುವುದು ತಪ್ಪು. ಇದನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನಲ್ಲಿ ಸಂಬಂಧಪಟ್ಟವರು ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದರು.

ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಸಂತೋಷ್ ಎಂಬಾತನನ್ನು ಬಂಧಿಸಿದ್ದು, ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಬಿಜೆಪಿಯವರು ದೌರ್ಜನ್ಯ ನಡೆಸಿದ್ದಾರೆಂದು ತಿಳಿದಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿದ್ದವು. ನಮ್ಮ ಸರಕಾರ ಬಂದ ಬಳಿಕ ಕಡಿಮೆಯಾಗಿವೆ ಎಂದರು.

ಬರ ನಿವಾರಿಸಿದ ಕೀರ್ತಿ: ರಾಷ್ಟ್ರದ ಬಡವರ ಹಸಿವು ನೀಗಿಸಲು ಪಡಿತರ ವ್ಯವಸ್ಥೆ ಜಾರಿಗೆ ತಂದದ್ದು ಲಾಲ್ ಬಹದ್ದೂರ್ ಶಾಸ್ತ್ರಿ. ಅತ್ಯಂತ ವ್ಯವಸ್ಥಿತವಾಗಿ ಬರಗಾಲವನ್ನು ನಿವಾರಿಸಿದ ಕೀರ್ತಿ ಅವರದು ಎಂದು ಸ್ಮರಿಸಿದರು. ಈ ವೇಳೆ ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಝಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News