ಸ್ಮಾರ್ಟ್ ಸಿಟಿ ಯೋಜನೆ: ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಡೊಮಿನಿಕ್ ಮ್ಯಾಕ್ ಅಲಿಸ್ಟೆರ್ ಚರ್ಚೆ

Update: 2018-01-11 12:01 GMT

ಧಾರವಾಡ, ಜ.11: ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಪರಿಣಿತ ಅವಕಾಶಗಳನ್ನು ಅಳವಡಿಸುವುದಕ್ಕಾಗಿ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈ ಕಮೀಷನರ್ ಆಗಿರುವ ಡೊಮಿನಿಕ್ ಮ್ಯಾಕ್ ಅಲಿಸ್ಟೆರ್ ನೇತೃತ್ವದ ತಂಡವು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳ ಜೊತೆಗೆ ಸಭೆ ನಡೆಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡೊಮಿನಿಕ್ ಮ್ಯಾಕ್ ಅಲಿಸ್ಟೆರ್, ಮಂಗಳೂರು ಮಹಾನಗರ ಪಾಲಿಕೆಯು ಬ್ರಿಟನ್ನಿನ ಪರಿಣಿತ ನಗರ ವಿನ್ಯಾಸಕರು ಮತ್ತು ಅಲ್ಲಿನ ವಿವಿಗಳ ಸಹಕಾರದಲ್ಲಿ ಉತ್ತಮ ಪ್ರಸ್ತಾವನೆಗಳನ್ನು ರೂಪಿಸಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಕೇಂದ್ರ ಸ್ಥಾನದಲ್ಲಿದ್ದು ಇಲ್ಲಿನ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಅಗತ್ಯವೆನಿಸಿದ ಪರಿಣಿತರ ನೆರವನ್ನು ಬ್ರಿಟಿಷ್ ಹೈ ಕಮಿಷನ್ ನೀಡಲಿದೆ ಎಂದು ಡೊಮಿನಿಕ್ ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಸ್ಮಾರ್ಟ್‌ಸಿಟಿ ಯೋಜನೆಯಡಿ ಅವಳಿ ನಗರದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿ, ಯೋಜನೆಗಳು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪಾಲಿಕೆಯು ಕೈಗೊಳ್ಳಲಿರುವ ಯೋಜನೆಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ನಾಗರಿಕ ಸೇವೆಗಳ ಉನ್ನತೀಕರಣ, ಸಾರಿಗೆ ವ್ಯವಸ್ಥೆ ಸುಧಾರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತು ನಿಯೋಗಕ್ಕೆ ಅವರು ವಿವರಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಧಾರವಾಡ ಜಿಲ್ಲೆಯ ಪರಿಚಯ ನೀಡಿ ಜಿಲ್ಲೆಯಲ್ಲಿ ಬ್ರಿಟನ್ ಸಹಯೋಗದೊಂದಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ ಎಂದರು.

ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಬ್ರಿಟನ್ ಉದ್ಯಮಗಳು ಮುಂದೆ ಬಂದರೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡಲಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಮಧ್ಯೆ ಉತ್ತಮ ದರ್ಜೆಯ ಸಾವಿರ ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸುವದಾದರೆ ಜಿಲ್ಲಾಡಳಿತ ಎಲ್ಲ ಮೂಲಭೂತ ಸೌಕರ್ಯಗಳು ಮತ್ತು ಭೂಮಿಯನ್ನು ಉಚಿತವಾಗಿ ಒದಗಿಸಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಬ್ರಿಟಿಷ್ ಹೈ ಕಮಿಷನ್‌ದ ಡೆಪ್ಯುಟಿ ಹೈ ಕಮೀಷನರ್ ಆಗಿರುವ ಡೊಮಿನಿಕ್ ಮ್ಯಾಕ್ ಅಲಿಸ್ಟೆರ್ ನೇತೃತ್ವದ ತಂಡದ ಸದಸ್ಯರು, ಬಿ.ಆರ್.ಟಿ.ಎಸ್ ಯೋಜನೆಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎಮ್.ಜಿ.ಹಿರೇಮಠ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಯೋಜನೆಯ ಸಮಾಲೋಚಕರು ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News