ಉ.ಪ್ರದೇಶ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2018-01-11 13:45 GMT

ಲಕ್ನೋ,ಜ.11: ಕಳೆದ ಮಂಗಳವಾರ ಅಝಮ್‌ಗಡದಲ್ಲಿ ರೌಡಿಶೀಟರ್ ಚನ್ನು ಸೋಂಕರ್ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಇದು 2017, ಮಾರ್ಚ್ 20ರಂದು ಆದಿತ್ಯನಾಥ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಹತ್ತು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ 30ನೇ ಬಲಿಯಾಗಿದೆ. ಈ ಅವಧಿಯಲ್ಲಿ 921 ಎನ್‌ಕೌಂಟರ್‌ಗಳು ನಡೆದಿದ್ದು, ಈ ಪೈಕಿ  30 ಜನರು ಕೊಲ್ಲಲ್ಪಟ್ಟಿದ್ದಾರೆ. ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ.

ಆರು ತಿಂಗಳಲ್ಲಿ ನಡೆದ 19 ಎನ್‌ಕೌಂಟರ್‌ಗಳ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕಳೆದ ವರ್ಷದ ನವೆಂಬರ್ 22ರಂದು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ ಜಾರಿಗೊಂಡ ಬಳಿಕ ಒಂದೂವರೆ ತಿಂಗಳಲ್ಲಿ ಇನ್ನೂ ಎಂಟು ಎನ್‌ಕೌಂಟರ್‌ಗಳು ನಡೆದಿದ್ದು, ಈ ಪೈಕಿ ಮೂರು ಹೊಸ ವರ್ಷದಲ್ಲಿ ನಡೆದಿವೆ. ಈ ಎನ್‌ಕೌಂಟರ್‌ಗಳಲ್ಲಿ ಎಂಟು ಅಪೇಕ್ಷಿತ ಕ್ರಿಮಿನಲ್‌ಗಳು ಮತ್ತು ಓರ್ವ ಪೊಲೀಸ್ ಸಾವನ್ನಪ್ಪಿದ್ದಾರೆ.

ಎನ್‌ಎಚ್‌ಆರ್‌ಸಿ ತನ್ನ ನೋಟಿಸಿಗೆ ಉತ್ತರಿಸಲು ಆರು ವಾರಗಳ ಗಡುವು ನೀಡಿದೆ. ಆದರೆ ನೋಟಿಸ್ ತನಗೆ ತಲುಪಿಯೇ ಇಲ್ಲ ಎಂದು ಉ.ಪ್ರ.ಸರಕಾರವು ಹೇಳುತ್ತಿದೆ.

ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಸಾವುಗಳಿಗೆ ಸಂಬಂಧಿಸಿದಂತೆ ಎನ್‌ಎಚ್‌ಆರ್‌ಸಿ ಯಿಂದ ಯಾವುದೇ ನೋಟಿಸ್‌ನ್ನು ಈವರೆಗೆ ನಾವು ಸ್ವೀಕರಿಸಿಲ್ಲ ಎಂದು ಪ್ರಧಾನ ಕಾರ್ಯದರ್ಶಿ(ಗೃಹ) ಅರವಿಂದ ಕುಮಾರ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News