ಉತ್ತರ ಪ್ರದೇಶ: ಶೌಚಾಲಯಗಳಿಗೂ ಕೇಸರಿ ಬಣ್ಣ!

Update: 2018-01-11 13:49 GMT

ಲಕ್ನೊ, ಜ.11: ಹಜ್ ಭವನ, ಬಸ್‌ಗಳ ನಂತರ ಉತ್ತರ ಪ್ರದೇಶದಲ್ಲಿ ಇದೀಗ ಶೌಚಾಲಯಗಳಿಗೂ ಕೇಸರಿ ಬಣ್ಣ ಬಲಿಯಲಾಗಿದೆ. ಇಲ್ಲಿನ ಎಟವಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಲಾಗಿರುವ ಶೌಚಾಲಯಗಳು ಕೇಸರಿಮಯವಾಗಿವೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಈ ಶೌಚಾಲಯಗಳಿಗೆ ಗ್ರಾಮಸ್ಥರೇ ಕೇಸರಿ ಬಣ್ಣವನ್ನು ಬಳಿದಿದ್ದು ಹಾಗೆ ಮಾಡುವುದರಿಂದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಂತೋಷವಾಗಿ ಗ್ರಾಮದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ನಡೆಸುವರು ಎಂಬ ನಂಬಿಕೆ ಅವರದ್ದಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಶೌಚಾಲಯಗಳಿಗೆ ಕೇಸರಿ ಬಣ್ಣ ಬಳಿಯುವ ನಿರ್ಧಾರಕ್ಕೆ ಗ್ರಾಮದ ಎಲ್ಲ ನಿವಾಸಿಗಳ ಸಹಮತವಿದ್ದು ಇದಕ್ಕೆ ಯಾರು ಕೂಡಾ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಸ್ವಚ್ಛ ಭಾರತ ಯೋಜನೆಯಡಿ ಟವಾದ ಅಮೃತಪುರ ಗ್ರಾಮದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ 350 ಶೌಚಾಲಯಗಳ ಪೈಕಿ ಈವರೆಗೆ ಗ್ರಾಮಸ್ಥರು 100 ಶೌಚಾಲಯಗಳಿಗೆ ಕೇಸರಿ ಬಣ್ಣವನ್ನು ಬಳಿದಿದ್ದಾರೆ. 350 ಶೌಚಾಲಯಗಳ ಪೈಕಿ ಈಗಾಗಲೇ 100 ಶೌಚಾಲಯಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗಿದೆ. ಉಳಿದ ಶೌಚಾಲಯಗಳಿಗೆ ಶೀಘ್ರದಲ್ಲೇ ಕೇಸರಿ ಬಣ್ಣ ಬಳಿಯಲಾಗುವುದು. ಈ ನಿರ್ಧಾರದ ಹಿಂದೆ ಯಾರ ಒತ್ತಡವೂ ಇಲ್ಲ. ಇದು ಗ್ರಾಮಸ್ಥರು ಒಮ್ಮತದಿಂದ ತೆಗೆದುಕೊಂಡಿರುವ ನಿರ್ಧಾರವಾಗಿದೆ. ನಮ್ಮ ಮುಖ್ಯಮಂತ್ರಿಯವರಿಗೆ ಕೇಸರಿ ಬಣ್ಣ ಎಂದರೆ ಪ್ರೀತಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಮಗೆ ಕೇಸರಿ ಬಣ್ಣದ ಮೇಲಿರುವ ಪ್ರೀತಿಯನ್ನು ಕಂಡು ಅವರು ನಮ್ಮ ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನಡೆಸುವರು ಎಂಬ ನಂಬಿಕೆ ಗ್ರಾಮಸ್ಥರದ್ದು ಎಂದು ಗ್ರಾಮ ಪ್ರಧಾನರಾದ ವೇದ ಪಾಲ್ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಜನವರಿ ಐದರಂದು ಹಜ್ ಭವನದ ಆವರಣ ಗೋಡೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ ನಂತರ ಉ.ಪ್ರ. ಹಜ್ ಸಮಿತಿಯ ಕಾರ್ಯದರ್ಶಿಯಾಗಿರುವ ಆರ್.ಪಿ ಸಿಂಗ್ ಈ ತಪ್ಪಿಗೆ ಗುತ್ತಿಗೆದಾರರನ್ನು ಜವಾಬ್ದಾರರನ್ನಾಗಿಸಿದ್ದರು. ನಂತರ ಈ ಆವರಣ ಗೋಡೆಗೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. 2017ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಅದೇ ತಿಂಗಳು ಮುಖ್ಯಮಂತ್ರಿ ಆದಿತ್ಯನಾಥ್ ಚಾಲನೆ ನೀಡಿದ ಐವತ್ತು ಬಸ್‌ಗಳು ಕೂಡಾ ಕೇಸರಿ ಬಣ್ಣ ಹೊಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News