ಭಾರತೀಯ ಪ್ರವಾಸಿಗರು ಪ್ರಪಂಚದಲ್ಲೇ ಅತೀಹೆಚ್ಚು ಖರ್ಚು ಮಾಡುವವರಾಗಿದ್ದಾರೆ: ತೈವಾನ್

Update: 2018-01-12 16:49 GMT

ತೈಪೆ, ಜ.12: ಭಾರತೀಯ ಮಾರುಕಟ್ಟೆಯು ಜಗತ್ತಿನಲ್ಲಿ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಭಾರತೀಯ ಪ್ರವಾಸಿಗರು ಪ್ರಪಂಚದಲ್ಲೇ ಅತೀಹೆಚ್ಚು ಖರ್ಚು ಮಾಡುವವರಾಗಿದ್ದಾರೆ ಎಂದು ತೈವಾನ್ ಪ್ರವಾಸೋದ್ಯಮ ಮಂಡಳಿಯ ನಿರ್ದೇಶಕರಾದ ಟ್ರಸ್ಟ್ ಲಿನ್ ತಿಳಿಸಿದ್ದಾರೆ.

 ಭಾರತೀಯ ಪ್ರವಾಸಿಗರು ಮಾಡುವ ಖರ್ಚು ಜಪಾನ್ ಮತ್ತು ಚೈನೀಸ್ ಪ್ರವಾಸಿಗರನ್ನೂ ಮೀರಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ ಲಿನ್, ಈ ಮಾರುಕಟ್ಟೆಯಲ್ಲಿ ನಮ್ಮ ಪಾಲನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ ಜೊತೆಗೆ ಭಾರತೀಯ ಸಂಸ್ಥೆಗಳು ಕೂಡಾ ತೈವಾನ್ ಮಾರುಕಟ್ಟೆಯ ಬಗ್ಗೆ ತಿಳಿಯಲು ಕಾತರರಾಗಿವೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮುಖ್ಯವಾಗಿ ನಾವು ಸಮೂಹ ವೀಸಾ ನೀತಿಯನ್ನು ಪರಿಚಯಿಸಿದ ಆ ನಂತರ ಭಾರತೀಯ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಮ್ಮ ಪ್ರವಾಸಿತಾಣಗಳ ಬಗ್ಗೆ ನಿರಂತರ ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುವ ಮೂಲಕ ತೈವಾನ್‌ಗೆ ಆಗಮಿಸುತ್ತಿರುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಹಲವು ದೇಶಗಳಿಗೆ ಬ್ರಾಂಡ್ ಇಂಡಿಯಾ ಬಹಳ ಮುಖ್ಯವಾಗಿದ್ದು ತೈವಾನ್ ಕೂಡಾ ಭಾರತೀಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ ಎಂದು ಲಿನ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದ ಯುವ, ಸುಶಿಕ್ಷಿತ, ಮಧ್ಯಮವರ್ಗವು ದುಪ್ಪಟ್ಟಾಗಲಿದ್ದು 547 ಮಿಲಿಯನ್ ತಲುಪಲಿದೆ ಎಂದು ಲಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News