ಮುಖ್ಯ ನ್ಯಾಯಮೂರ್ತಿ ಸ್ಥಾನ ತ್ಯಜಿಸಿ ನ್ಯಾಯಾಂಗದ ಘನತೆ ಎತ್ತಿಹಿಡಿಯಲಿ: ಪ್ರೊ.ರವಿವರ್ಮ ಕುಮಾರ್

Update: 2018-01-13 13:09 GMT

ಬೆಂಗಳೂರು, ಜ. 13: ‘ಹಿಂದೆಂದೂ ಕಂಡಿರದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಎದುರಿಸುತ್ತಿದ್ದು, ಮುಖ್ಯ ನ್ಯಾಯಾಧೀಶರ ಮೇಲೆ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳು ಕೊಲಿಜಿಯಂ ಸದಸ್ಯರು. ಹೀಗಾಗಿ ಮುಖ್ಯ ನ್ಯಾಯಾಧೀಶರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆಂಬುದಕ್ಕೆ ಇದು ಸಾಕ್ಷಿಯಾಗಿದೆ. ಆದುದರಿಂದ ಮುಖ್ಯ ನ್ಯಾಯಮೂರ್ತಿಗಳು ಕೂಡಲೇ ತಮ್ಮ ಸ್ಥಾನವನ್ನು ತ್ಯಜಿಸಬೇಕು’ ಎಂದು ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದ್ದಾರೆ.

ಶನಿವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ ಪ್ರೊ.ರವಿವರ್ಮ ಕುಮಾರ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿ, ಸಿಜೆ ಮೇಲೆ ಬಹಿರಂಗವಾಗಿ ಮಾಡಿರುವ ಆರೋಪಗಳು ಗುರುತರವಾದವು. ದುರಾಡಳಿತದಿಂದ ನ್ಯಾಯಾಂಗ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಆರೋಪಗಳ ಭಾರ ಹೊತ್ತು ಸಿಜೆ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಮೊಕದ್ದಮೆಗಳನ್ನು ತೀರ್ಮಾನ ಮಾಡುವ ಪೀಠಗಳನ್ನು ಮನಸೋ ಇಚ್ಛೆ ಬದಲಾಯಿಸುತ್ತಿದ್ದು, ಆ ಮೂಲಕ ತಮಗೆ ಇಷ್ಟಬಂದ ನ್ಯಾಯಾಧೀಶರುಗಳಿಗೆ ಅತಿ ಮುಖ್ಯ ಕೇಸುಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನಿನ ಆಡಳಿತದ ಬದಲು ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ ಎಂದು ಆಪಾದಿಸಿದರು.

ಸ್ವಾಯತ್ತತೆಗೆ ಮಾರಕ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಕಾರ್ಯವೈಖರಿ ಪ್ರಜಾತಂತ್ರ, ನ್ಯಾಯಾಂಗದ ಘನತೆಗೆ ಮಾರಕ. ಮಾತ್ರವಲ್ಲ, ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ, ಸ್ವಾತಂತ್ರಕ್ಕೆ ಧಕ್ಕೆಯಾಗಿದೆ. ಇದು ದೇಶದ ಹಿತಕ್ಕೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೊಲಿಜಿಯಂನ ನಾಲ್ವರು ಸದಸ್ಯರು ಎರಡು ತಿಂಗಳ ಹಿಂದೆಯೇ ಈ ಬಗ್ಗೆ ಪತ್ರ ಬರೆದರೂ ಮುಖ್ಯ ನ್ಯಾಯಮೂರ್ತಿ ಮೌನ ವಹಿಸಿದ್ದಾರೆ. ಹೀಗಾಗಿ ದೇಶದ ಜನತೆ ನಿರ್ಧರಿಸಲಿ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿಕೊಂಡಿದ್ದು, ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿಗಳ ಗಂಭೀರ ಸ್ವರೂಪದ ಆರೋಪದ ಬಗ್ಗೆ ತನಿಖೆ ನಡೆಸುವ ಅಧಿಕಾರ ಬೇರೆ ಯಾರಿಗೂ ಇಲ್ಲ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿಗಿಂತ ಮೇಲೆ ಯಾರೂ ಇಲ್ಲ. ಹೀಗಾಗಿ ಈ ಆರೋಪಗಳ ತನಿಖೆಯಾಗದೆ ನ್ಯಾಯಾಂಗ ವ್ಯವಸ್ಥೆಯನ್ನೇ ಕೊರೆದು ತಿನ್ನುವ ಆತಂಕ ಸೃಷ್ಟಿಯಾಗಿದೆ ಎಂದು ಪ್ರೊ.ರವಿವರ್ಮ ಕುಮಾರ್ ವಿಶ್ಲೇಷಿಸಿದರು.

ಮುಖ್ಯ ನ್ಯಾಯಾಧೀಶರು ತಮ್ಮ ಮೇಲಿನ ಆರೋಪಗಳನ್ನವರು ನಿರಾಕರಿಸಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅವರು ಮೌನವಾಗಿರುವುದನ್ನು ನೋಡಿದರೆ ಆರೋಪಗಳು ನಿಜ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸುವುದು ಮುಖ್ಯ ನ್ಯಾಯಾಧೀಶರಿಂದ ಮಾತ್ರ ಸಾಧ್ಯ. ಈ ವಿಷಯದಲ್ಲಿ ಮೂಗು ತೂರಿಸಿದರೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಹೊಡೆತ ಬೀಳುತ್ತದೆ ಎಂದು ರವಿವರ್ಮ ಕುಮಾರ್ ಎಚ್ಚರಿಸಿದರು.

‘ನ್ಯಾಯಾಂಗ ವ್ಯವಸ್ಥೆಯಲ್ಲಿನ ಪ್ರಸಕ್ತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ನ್ಯಾಯಾಂಗದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ಆದುದರಿಂದ ಮುಖ್ಯ ನ್ಯಾಯಾಧೀಶರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮಸ್ಯೆ ಪರಿಹರಿಸುವ ಮೂಲಕ ನ್ಯಾಯಾಂಗದ ಘನತೆ ಎತ್ತಿಹಿಡಿಯಬೇಕು’

-ಪ್ರೊ.ರವಿವರ್ಮ ಕುಮಾರ್ ಹಿರಿಯ ನ್ಯಾಯವಾದಿ, ಸಂವಿಧಾನ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News