ಬಳ್ಳಾರಿಯಲ್ಲಿ 5,450 ಕೋಟಿ ರೂ.ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ ಗಂಭೀರ ಆರೋಪ

Update: 2018-01-13 13:18 GMT

ಬೆಂಗಳೂರು, ಜ. 13: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಸರಕಾರ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್‌ನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ 5,450 ಕೋಟಿ ರೂ.ಮೊತ್ತದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಶನಿವಾರ ಜೆಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಿನರಲ್ಸ್ ಲಿಮಿಟೆಡ್(ಎಂಎಂಎಲ್) ಮೂಲಕ ಗಣಿ ಗುತ್ತಿಗೆ ಪಡೆದಿರುವ ಎರಡು ಕಂಪೆನಿಗಳು ವಾರ್ಷಿಕ 30ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ತೆಗೆಯಲು ಅನುಮತಿ ಪಡೆದಿವೆ.

ಆದರೆ, 2014ರಿಂದ 2017ರ ಅನಧಿಕೃತವಾಗಿ ಹೆಚ್ಚುವರಿಯಾಗಿ 60,56,440 ಮೆಟ್ರಿಕ್ ಟನ್ ತೆಗೆದು ಸಾಗಣೆ ಮಾಡಲಾಗಿದೆ. ಎಂಎಂಎಲ್ ಅಧಿಕಾರಿಗಳ ತಂಡದ ಆಂತರಿಕ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಅಕ್ರಮದಲ್ಲಿ ಅಧಿಕಾರಿಯ ಪಾತ್ರ: ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹೆಸರಿಗಷ್ಟೇ ವಿನಯ ಕುಲಕರ್ಣಿ ಸಚಿವರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರೇ ಆ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಈ ಅಕ್ರಮಗಳಲ್ಲಿ ಅವರ ಪಾತ್ರವೂ ಇದೆ ಎಂದು ಕುಮಾರಸ್ವಾಮಿ ದೂರಿದರು.

ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೂ ಪ್ರಸ್ತುತ ನಡೆದಿರುವ ಅಕ್ರಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಚೆಕ್‌ನಲ್ಲಿ ಲಂಚದ ಹಣ ಪಡೆದ ಕಾರಣಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಆದರೆ, ಸಿಎಂ ತಾವು ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದ ಈ ಅಕ್ರಮ ಮಾಡಿಸಿದ್ದಾರೆಂದು ಟೀಕಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿಲ್ಲ. ಆ ನಿರಾಸೆ ಕಾರಣ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಸಮಯ ವ್ಯರ್ಥ ಮಾಡಲು ತಾನು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ನನ್ನನ್ನು ‘ಹಿಟ್ ಅಂಡ್ ರನ್’ ಕೇಸ್ ಎಂದು ಟೀಕಿಸುತ್ತಿದ್ದಾರೆ. ಕಿಕ್‌ಬ್ಯಾಕ್ ಪಡೆದು ಸುಮ್ಮನಾಗಿದ್ದೇನೆಂದು ಬಿಜೆಪಿ ಬೆಂಬಲಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದೇನೆಂದು ಕುಮಾರಸ್ವಾಮಿ ಸ್ಪಷ್ಟಣೆ ನೀಡಿದರು.

‘ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆತಟ್ಟಿ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯನವರು ಇದಕ್ಕೆ ಉತ್ತರ ನೀಡಬೇಕು. ಕೂಡಲೇ ತನಿಖೆಗೆ ಆದೇಶಿಸಬೇಕು. ಯಾವ ತನಿಖೆ ನಡೆಸಬೇಕೆಂಬುದನ್ನು ಮುಖ್ಯಮಂತ್ರಿಯವರೇ ನಿರ್ಧರಿಸಲಿ’

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News