ಚುನಾವಣೆಗಾಗಿ ಪಿಎಫ್‌ಐ ಮೇಲೆ ಸುಳ್ಳು ಆರೋಪ: ವಾಸೀಂ ಅಹ್ಮದ್

Update: 2018-01-13 13:40 GMT

 ಬೆಂಗಳೂರು, ಜ.13: ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮೇಲೆ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಪಿಎಫ್‌ಐ ಬೆಂಗಳೂರು ಜಿಲ್ಲಾಧ್ಯಕ್ಷ ವಾಸೀಂ ಅಹ್ಮದ್ ಹೇಳಿದರು.

 ಶನಿವಾರ ನಗರದ ಪುರಭವನದ ಎದುರು ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ’ ಎಂದು ಪ್ರಶ್ನಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಸೀಂ ಅಹ್ಮದ್, ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಅಧಿಕಾರ ವಂಚಿತರಾದ ಬಿಜೆಪಿಯು ಅಧಿಕಾರ ಮರಳಿ ಪಡೆಯುವ ಯೋಜನೆಯ ಭಾಗವಾಗಿ ಹಿಂದೂ-ಮುಸ್ಲಿಮರ ನಡುವೆ ಕೋಮು ವೈಷಮ್ಯವನ್ನು ಭಿತ್ತಿ ಅಮಾಯಕರ ಬಲಿ ಪಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಬೇರೆ ಕಾರಣಗಳಿಂದ ಕೊಲೆಯಾದರೂ, ಮುಸ್ಲಿಮರ ತಲೆಗೆ ಕಟ್ಟಲು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಮತ ಧ್ರುವೀಕರಣವನ್ನೆ ಗುರಿಯಾಗಿಸಿಕೊಂಡಿರುವ ಬಿಜೆಪಿ ನಾಯಕರು, ವಿವಾದಿತ ಹೇಳಿಕೆಗಳನ್ನು ನೀಡಿ ಸಮಾಜ ಒಡೆಯಲು ಮುಂದಾಗಿದ್ದಾರೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ 23 ಹಿಂದೂಗಳ ಹತ್ಯೆ ಮುಸ್ಲಿಮರಿಂದ ನಡೆದಿದೆ ಎಂದು ಸುಳ್ಳು ವರದಿ ನೀಡಿರುವುದು ಬಿಜೆಪಿಯ ದಿವಾಳಿತನದ ಸೂಚನೆಯಾಗಿದೆ ಎಂದ ಅವರು, ಸಂಘಪರಿವಾರ ಕಾರ್ಯಕರ್ತರಿಂದಲೇ ಕರಾವಳಿ ಭಾಗದಲ್ಲಿ ಸುಮಾರು 13 ಹಿಂದೂಗಳ ಹತ್ಯೆ ನಡೆದಿದ್ದರೂ, ಇದುವರೆಗೂ ಈ ಬಗ್ಗೆ ಮಾತನಾಡಿಲ್ಲ ಎಂದು ದೂರಿದರು.

ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಉಸ್ಮಾನ್ ಬೇಗ್ ಮಾತನಾಡಿ, ಪಿಎಫ್‌ಐ ದಲಿತ ಮತ್ತು ಮುಸ್ಲಿಮರ ಏಳಿಗೆಗಾಗಿ ಶ್ರಮಿಸುತ್ತಿದೆ. ಆದರೆ, ಇದನ್ನು ಸಹಿಸದ ಸಂಘಪರಿವಾರ, ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಒಂದು ವೇಳೆ ಪಿಎಫ್‌ಐ ನಿಷೇಧ ಮಾಡಿದರೆ, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News