ದೇಶದ ಅತ್ಯಂತ ಶ್ರೀಮಂತ, ಬಡ ರಾಜ್ಯಗಳು ಯಾವುವು?

Update: 2018-01-13 14:07 GMT

ಹೊಸದಿಲ್ಲಿ, ಜ.13: 2015-16ರಲ್ಲಿ ನಡೆಸಲಾದ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್-4) ನಾಲ್ಕನೇ ಆವೃತ್ತಿಯ ಅಂಕಿಅಂಶಗಳ ಪ್ರಕಾರ ದಿಲ್ಲಿ ಮತ್ತು ಪಂಜಾಬ್ ದೇಶದಲ್ಲೇ ಅತ್ಯಂತ ಶ್ರೀಮಂತ ರಾಜ್ಯಗಳಾಗಿದ್ದು ಜೈನರು ಅತ್ಯಂತ ಶ್ರೀಮಂತ ಸಮುದಾಯವಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಆರು ಲಕ್ಷ ಕುಟುಂಬಗಳನ್ನು ಬಳಸಿಕೊಳ್ಳಲಾಗಿದೆ.

ಎನ್‌ಎಫ್‌ಎಚ್‌ಎಸ್-4 ಸಮೀಕ್ಷೆಯ ಸಂಪೂರ್ಣ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದಕ್ಕಾಗಿ ಸಂಸ್ಥೆಯು ಆಸ್ತಿ ಸೂಚ್ಯಂಕವನ್ನು ರಚಿಸಿದ್ದು ಅದನ್ನು ದೂರದರ್ಶನ, ಸೈಕಲ್ ಹಾಗೂ ಇತರ ಗ್ರಾಹಕ ವಸ್ತುಗಳ ಮಾಲಕತ್ವ ಹಾಗೂ ಶುದ್ಧ ಕುಡಿಯುವ ನೀರು ಮುಂತಾದವುಗಳ ಲಭ್ಯತೆಯ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ಅದರ ಮಾಹಿತಿಯ ಆಧಾರದಲ್ಲಿ ಕುಟುಂಬಗಳನ್ನು ಆಸ್ತಿ ಪಂಗಡಗಳಾಗಿ ವಿಂಗಡಿಸಲಾಗಿದೆ. ಈ ವಿಂಗಡನೆಯ ಕೆಳಹಂತದಲ್ಲಿರುವ ಕುಟುಂಬಗಳು ಬಡ 20% ಆಗಿದ್ದರೆ ಮೇಲಿರುವ ಪಂಗಡಗಳು ಶ್ರೀಮಂತ 20% ಆಗಿದೆ ಎಂದು ಪರಿಗಣಿಸಲಾಗಿದೆ.

ಆನಂತರ ಈ ಪಂಗಡಗಳ ಅಂಕಗಳನ್ನು ರಾಜ್ಯಗಳ ಜನಸಂಖ್ಯೆ, ಧಾರ್ಮಿಕ ಮತ್ತು ಜಾತಿ ಗುಂಪುಗಳು ಹಾಗೂ ಗ್ರಾಮೀಣ-ನಗರ ಪ್ರದೇಶಗಳ ಜೊತೆ ಸೇರಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಬಡತನವೆಂಬುದು ಗ್ರಾಮೀಣ ಭಾಗದ ಸಮಸ್ಯೆಯಾಗಿದೆ. ಕೆಳಮಟ್ಟದ ಗುಂಪಿನಲ್ಲಿ ಗ್ರಾಮೀಣ ಭಾರತದ ಪಾಲು ಶೇಕಡ 29 ಆಗಿದ್ದರೆ ನಗರದ ಪಾಲು ಕೇವಲ 3.3% ಆಗಿದೆ. ಅದರರ್ಥ ಗ್ರಾಮೀಣ ಭಾಗದ 20% ಜನಸಂಖ್ಯೆಯ ಆಸ್ತಿಯು ಕೆಳಹಂತದ 20%ದಲ್ಲಿರುವ ದೇಶದ ಜನಸಂಖ್ಯೆಗೆ ಸಮವಾಗಿದೆ. ರಾಜ್ಯಗಳ ವಿಷಯದಲ್ಲಿ, ದಿಲ್ಲಿ ಮತ್ತು ಪಂಜಾಬ್‌ನ 60% ಕುಟುಂಬಗಳು ಆಸ್ತಿ ಮೇಲ್ಮಟ್ಟದ ಗುಂಪಿನಲ್ಲಿವೆ. ಬಿಹಾರದ ಅರ್ಧದಷ್ಟು ಕುಟುಂಬಗಳು ಕೆಳಮಟ್ಟದ ಗುಂಪಿನಲ್ಲಿದ್ದು ದೇಶದಲ್ಲೇ ಅತ್ಯಂತ ಬಡರಾಷ್ಟ್ರವಾಗಿದೆ. ಸಮುದಾಯಗಳ ಪೈಕಿ, ಜೈನ ಸಮುದಾಯದ 70% ಕುಟುಂಬಗಳು ಅಗ್ರ ಮಟ್ಟದಲ್ಲಿವೆ. ಹಿಂದೂ ಮತ್ತು ಮುಸ್ಲಿಮ್ ಸಮುಯಾದ ಮಧ್ಯೆ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಎರಡು ಗುಂಪುಗಳೂ ರಾಷ್ಟ್ರೀಯ ಆಸ್ತಿ ಹಂಚಿಕೆಯ ಬಹಳ ಸಮೀಪವಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಮೇಲ್ಮಟ್ಟದ ಗುಂಪಿನಲ್ಲಿ ಹಿಂದೂಗಳ ಪೈಕಿ ಮೇಲ್ವರ್ಗದ ಜಾತಿಗಳ ಪಾಲು ಇತರ ಜಾತಿಗಳಿಗಿಂತ ದುಪ್ಪಟ್ಟಾಗಿದೆ. ಪರಿಶಿಷ್ಟ ಪಂಗಡದ ಸ್ಥಿತಿ ಮಾತ್ರ ಅತ್ಯಂತ ಕಳಪೆಯಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸುತ್ತದೆ.

ಆದಾಯ ಮತ್ತು ಆಸ್ತಿ ಹಂಚಿಕೆಯಲ್ಲಿರುವ ಹೆಚ್ಚಿನ ಅಸಮಾನತೆಯು ಭಾರತದ ಮಟ್ಟಿಗೆ ಆತಂಕದ ವಿಷಯವಾಗಿದೆ. ಎನ್‌ಎಫ್‌ಎಸ್‌ಎಸ್-4ರ ಅಂಕಿಅಂಶಗಳು ಬಹಿರಂಗ ಮಾಡಿರುವ ಆಸ್ತಿಗಳ ಹಂಚುವಿಕೆಯಲ್ಲಿನ ವ್ಯತ್ಯಾಸಗಳು, ಈ ಸಮಸ್ಯೆಯನ್ನು ಬರೆಹರಿಸಲು ಒಂದೇ ರೀತಿಯ ನಿಯಮವನ್ನು ಸರಕಾರ ಜಾರಿಗೊಳಿಸಿದರೆ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News