ಬೆಂಗಳೂರು: ಮಾತೃಪೂರ್ಣ ಯೋಜನೆ ಜಾರಿಗೆ ಆಗ್ರಹಿಸಿ ಜ.17 ರಂದು ಧರಣಿ

Update: 2018-01-13 14:24 GMT

ಬೆಂಗಳೂರು, ಜ.13: ಮಾತೃಪೂರ್ಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ, ಫಲಾನುಭವಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜ.17 ರಂದು ರಾಜ್ಯಾದ್ಯಂತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್, ರಾಜ್ಯ ಸರಕಾರ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದು ಅ.2 ರಿಂದ ಮಾತೃಪೂರ್ಣ ಯೋಜನೆ ಆರಂಭಿಸಲಾಗಿದೆ. ಆದರೆ, ಈ ಯೋಜನೆಯನ್ನು ಜಾರಿ ಮಾಡಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಕಳಪೆ ಗುಣಮಟ್ಟದಲ್ಲಿ ಯೋಜನೆ ಜಾರಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆಯುತ್ತಿದೆ. ಆದರೆ, ಇದುವರೆಗೂ ಶೇ.60 ರಷ್ಟು ಅನುಷ್ಠಾನಗೊಂಡಿಲ್ಲ. ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ 2-3 ಕಿ.ಮೀ. ನಡೆದುಕೊಂಡು ಬಂದು ಊಟ ಮಾಡಿ ಹೋಗಲು ಸಾಧ್ಯವಾಗುತ್ತಿಲ್ಲ. ಇನ್ನುಳಿದಂತೆ ಶೇ.40 ರಷ್ಟು ಪೌಷ್ಠಿಕ ಆಹಾರ ದುರುಪಯೋಗವಾಗುತ್ತಿದೆ ಎಂದು ಅವರು ಹೇಳಿದರು.

ಅಂಗನವಾಡಿ ಕೇಂದ್ರಗಳಿಂದ ಆಹಾರ ನೀಡುವುದರ ಬದಲಿಗೆ ಫಲಾನುಭವಿಗಳ ಮನೆಗಳಿಗೆ ಆಹಾರ ತಲುಪಿಸುವುದು ಸೂಕ್ತ ಎಂದು ಶೇ.92 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರಾಜ್ಯದಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 34 ಸಾವಿರ ಅಂಗನವಾಡಿಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದೆಲ್ಲವೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ. ಅಂತಹ ಸ್ಥಳದಲ್ಲಿ ಗರ್ಭಿಣಿಯರಿಗೆ ಹೇಗೆ ಆಹಾರ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಬೇಡಿಕೆಗಳು: ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ಕೊಠಡಿ, ಪೀಠೋಪಕರಣಗಳನ್ನು ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿರಿಗೆ ಕನಿಷ್ಟ ವೇತನ 18 ಸಾವಿರ ನೀಡಬೇಕು. ಸಮಗ್ರ ಬಾಲ ವಿಕಾಸ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ನಿಲ್ಲಿಸಬೇಕು. ಅಂಗನವಾಡಿ ಕೇಂದ್ರಗಳ ಸಮಯವನ್ನು ಹಿಂದಿನಂತೆ ಬೆ. 9-30 ರಿಂದ 1-30 ರವರೆಗೆ ನಡೆಸುವಂತೆ ಸರಕಾರ ಆದೇಶ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸಿ ಪೂರ್ಣ ಪ್ರಮಾಣದ ಅಂಗನವಾಡಿಯಾಗಿ ಪರಿವರ್ತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News