ಬೆಂಗಳೂರು: ಉದ್ಯೋಗಕ್ಕಾಗಿ ಓಟು ಆಂದೋಲನಕ್ಕೆ ಬೆಂಬಲ

Update: 2018-01-13 14:30 GMT

ಬೆಂಗಳೂರು, ಜ.13: ಉದ್ಯೋಗ ಸೃಷ್ಟಿಗೆ ಆಗ್ರಹಿಸಿ ಉದ್ಯೋಗಕ್ಕಾಗಿ ಯುವ ಜನರು ವೇದಿಕೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಜನಾಂದೋಲನಗಳ ಮಹಾಮೈತ್ರಿ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಮಹಾಮೈತ್ರಿಯ ಸಂಚಾಲಕ ಎಸ್.ಆರ್.ಹೀರೇಮಠ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತಿದೊಡ್ಡ ಸಮಸ್ಯೆಯಾಗಿದೆ. ಆದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ, ಸ್ವಾರ್ಥ ರಾಜಕೀಯ ಹಾಗೂ ಧರ್ಮ ರಾಜಕಾರಣ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಉದ್ಯೋಗ ಭರವಸೆ ನೀಡುವವರಿಗೆ ಮಾತ್ರ ಮತ ಹಾಕಲಾಗುತ್ತದೆ ಎಂದು ಹೇಳಿದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಚುನಾವಣೆ ಪೂರ್ವದಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಇದೀಗ ಅವರ ದಾಖಲೆಗಳ ಪ್ರಕಾರ ಮೂರು ವರ್ಷಗಳಲ್ಲಿ ಸೃಷ್ಟಿಯಾಗಿರುವುದು ಕೇವಲ 4 ಲಕ್ಷ ಉದ್ಯೋಗಗಳು ಮಾತ್ರ. ಆದರೆ, ನೋಟುಗಳ ಅಪವೌಲ್ಯೀಕರಣ ಮತ್ತು ಜಿಎಸ್‌ಟಿ ಜಾರಿಯಾದ ನಂತರ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಯುವಜನರು ಹಳ್ಳಿಗಳಲ್ಲಿಯೇ ಉಳಿದುಕೊಂಡು ಸ್ವಾವಲಂಬಿಗಳಾಗಲು ಸಾಧ್ಯವಾಗುವಂತೆ ಕೃಷಿ ಉತ್ಪನ್ನಗಳ ವೌಲ್ಯವರ್ಧನೆಯಂತಹ ನೂತನ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿದೆ. ಆದರೆ, ಆಡಳಿತದಲ್ಲಿರುವ ಸರಕಾರಗಳಿಗೆ ಇಚ್ಛಾಶಕ್ತಿಯಿಲ್ಲ. ಅಲ್ಲದೆ, ವೋದಿ ಚುನಾವಣೆ ವೇಳೆಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿ ಕೃಷಿಯೆಡೆಗೆ ಯುವ ಜನರನ್ನು ಆಕರ್ಷಿಸುವ ಭರವಸೆ ನೀಡಿದ್ದರು. ಈಗ ಆ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಗುತ್ತಿಗೆ ಆಧಾರಿತ ನೌಕರಿಗಳಲ್ಲಿರುವವರಿಗೆ ಸೇವಾ ಭದ್ರತೆ ನೀಡುವ ಮೂಲಕ ಯಾವುದೇ ತಾಂತ್ರಿಕ ಅಡ್ಡಿಯೂ ಇಲ್ಲದಂತೆ ಉದ್ಯೋಗದ ಘನತೆಯನ್ನು ಕಾಪಾಡಬಹುದು. ಹಾಗೆಯೇ ಸರಕಾರಿ ವಲಯದ ಹುದ್ದೆಗಳು ಸೇರಿದಂತೆ ರಾಜ್ಯಾದ್ಯಂತ ಖಾಲಿಯಿರುವ ಹುದ್ದೆಗಳನ್ನು ಶಾಶ್ವತವಾಗಿ ತುಂಬುವ ಮೂಲಕ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ. ಆದರೆ, ಸರಕಾರದ ನೀತಿಗಳು ಜನ ಸಾಮಾನ್ಯರಿಗೆ ಉದ್ಯೋಗ ಸೃಷ್ಟಿ ಮಾಡುವ ಬದಲಿಗೆ, ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾ ಮೈತ್ರಿಯ ಮುಖಂಡರಾದ ರಾಘವೇಂದ್ರ ಕುಷ್ಟಗಿ, ಮಲ್ಲಿಗೆ ಸಿರಿಮನೆ, ಮುತ್ತುರಾಜ್, ಭರತ್ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News