ನಾಣ್ಯಗಳ ಉತ್ಪಾದನೆ ಪುನರಾರಂಭ

Update: 2018-01-13 14:51 GMT

ಕೋಲ್ಕತಾ,ಜ.13: ನಾಣ್ಯಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಸರಕಾರವು, ಉತ್ಪಾದನೆಯನ್ನು ಪುನರಾರಂಭಿಸುವಂತೆ ಎಲ್ಲ ನಾಲ್ಕೂ ಟಂಕಸಾಲೆಗಳಿಗೆ ಸೂಚಿಸಿದೆ. ಆದರೆ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅದು ನಿರ್ದೇಶ ನೀಡಿದೆ.

  ಎಂದಿನ ಎರಡು ಪಾಳಿಗಳ ಬದಲು ಒಂದೇ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತೆ ಹಾಗೂ ವಿವಿಧ ಮುಖಬೆಲೆಗಳ ನಾಣ್ಯಗಳ ಉತ್ಪಾದನೆಯನ್ನು ಮುಂದುವರಿಸುವಂತೆ ಕೋಲ್ಕತಾ, ನೊಯ್ಡಾ, ಮುಂಬೈ ಮತ್ತು ಹೈದರಾಬಾದ್‌ಗಳಲ್ಲಿ ನಾಲ್ಕು ಟಂಕಸಾಲೆಗಳನ್ನು ಹೊಂದಿರುವ ಸರಕಾರಿ ಸ್ವಾಮ್ಯದ ಸೆಕ್ಯೂರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಸ್‌ಪಿಎಂಸಿಐಎಲ್)ಕ್ಕೆ ಅದು ಸೂಚಿಸಿದೆ.

ಶುಕ್ರವಾರದಿಂದಲೇ ನಾಣ್ಯಗಳನ್ನು ಟಂಕಿಸುವುದನ್ನು ಆರಂಭಿಸಿದ್ದೇವೆ. ಎಲ್ಲ ಮುಖಬೆಲೆಗಳ ನಾಣ್ಯಗಳನ್ನು ಟಂಕಿಸುವಂತೆ ನಮಗೆ ಸೂಚಿಸಲಾಗಿದೆ ಎಂದು ಕಲ್ಕತ್ತಾ ಟಂಕಸಾಲೆ ಉದ್ಯೋಗಿಗಳ ಸಂಘದ ಉಪಾಧ್ಯಕ್ಷ ಬಿಜನ್ ಡೇ ಸುದ್ದಿಸಂಸ್ಥೆಗೆ ತಿಳಿಸಿದರು.

ಆರ್‌ಬಿಐ 2017-18ನೇ ಸಾಲಿಗಾಗಿ 7,712 ಮಿಲಿಯನ್ ನಾಣ್ಯಗಳಿಗಾಗಿ ಸರಕಾರಿ ಟಂಕಸಾಲೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಈ ಪೈಕಿ 5,900 ಮಿ.ನಾಣ್ಯಗಳನ್ನು ಈಗಾಗಲೇ ಟಂಕಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಉಳಿದ ಎರಡೂವರೆ ತಿಂಗಳುಗಳಲ್ಲಿ ಟಂಕಸಾಲೆಗಳು ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದರು. ಮಾರುಕಟೆಯಲ್ಲಿ ನಾಣ್ಯಗಳ ಸಾಕಷ್ಟು ಲಭ್ಯತೆ ಮತ್ತು ನಾಣ್ಯಗಳ ದಾಸ್ತಾನಿಗೆ ಸ್ಥಳಾವಕಾಶದ ಕೊರತೆಯಿಂದಾಗಿ ಸರಕಾರವು ಅವುಗಳ ಉತ್ಪಾದನೆಯನ್ನು ಜ.9ರಿಂದ ಸ್ಥಗಿತಗೊಳಿಸಿತ್ತು.

 ನಾಣ್ಯಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಕೇವಲ ನೋಟುಗಳನ್ನು ಮುದ್ರಿಸುವಂತೆ ಸರಕಾರವು ಎಸ್‌ಪಿಎಂಸಿಐಲ್‌ಗೆ ಆದೇಶಿಸಿತ್ತು. ಅಲ್ಲದೆ ಸಾಮಾನ್ಯ ಕೆಲಸದ ಅವಧಿಯನ್ನು ಅನುಸರಿಸುವಂತೆ ಮತ್ತು ಕಾರ್ಮಿಕರಿಗೆ ಓವರ್‌ಟೈಮ್ ನೀಡದಂತೆ ಸೂಚಿಸಿತ್ತು. ಇದು ತಮ್ಮ ವೇತನದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂಬ ಕಾರಣದಿಂದ ಸರಕಾರದ ಆದೇಶವನ್ನು ಕಾರ್ಮಿಕರು ಪ್ರತಿಭಟಿಸಿದ್ದರು. ಈ ಬಗ್ಗೆ ಅಹವಾಲುಗಳನ್ನೂ ಸರಕಾರಕ್ಕೆ ಸಲ್ಲಿಸಲಾಗಿತ್ತು ಮತ್ತು ಈ ಹಿನ್ನೆಲೆಯಲ್ಲಿ ನಾಣ್ಯಗಳ ಪುನರಾರಂಭಕ್ಕೆ ಸರಕಾರವು ನಿರ್ಧರಿಸಿದೆ ಎಂದು ಡೇ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News