ಕೆಎಲ್‌ಇ ಸಂಸ್ಥೆ ಕಾರ್ಯವೈಖರಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ

Update: 2018-01-13 15:27 GMT

ಬೆಳಗಾವಿ, ಜ.13: ಕೆಎಲ್‌ಇ ಸಂಸ್ಥೆಯು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವುದು ಈ ಭಾಗದ ಜನರ ಭಾಗ್ಯ. ಈ ಸಂಸ್ಥೆಯು ಸಮಾಜದ ಪರಿವರ್ತನೆಯಲ್ಲಿ ನಿಜವಾಗಿಯೂ ತೊಡಗಿಕೊಂಡಿರುವುದಕ್ಕೆ ಇದು ಸಾಕ್ಷಿ ಎಂದು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸಲಾಗಿರುವ ಎಸ್‌ಪಿಇಸಿಟಿ ಹಾಗೂ ಪಿಇಟಿ-ಸಿಟಿ ಮತ್ತು ರೆಡಿಯೋ ನೂಕ್ಲಿಯರ್ ಥೆರಪಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

 ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಸಂಸ್ಥೆಯು ನಿಜವಾದ ಕಳಕಳಿ ಹೊಂದಿದೆ. ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಭವ್ಯವಾದ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ವೈದ್ಯರು ಅಷ್ಟೇ ಒಳ್ಳೆಯವರು. ಸಮಾಜದ ಅನಾರೋಗ್ಯವನ್ನು ಹೋಗಲಾಡಿಸಲು ತಮ್ಮ ವೈದ್ಯರು ನಿರಂತರವಾಗಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅನನ್ಯ ಎಂದು ಅವರು ಬಣ್ಣಿಸಿದರು. ಒಂದೆ ಸೂರಿನಡಿ ಸಕಲ ವೈದ್ಯಕೀಯ ಸೇವೆಗಳನ್ನು ಕಲ್ಪಿಸುತ್ತಿರುವ ಆಸ್ಪತ್ರೆಯು ನಿರಂತರವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾಗುತ್ತಿರುವ ಆವಿಷ್ಕಾರಗಳನ್ನು ಜನರಿಗೆ ತಲುಪಿಸುತ್ತಿದೆ. ಈಗ ಮತ್ತೊಂದು ಅತ್ಯಾಧುನಿಕವಾದ ಮೊಲೆಕ್ಯೂಲರ್ ಇಮೆಜಿಂಗ್ ಇನ್ ದಿ ನೂಕ್ಲಿಯರ್ ಮೆಡಿಸಿನ್ ಸ್ಪೆಶಾಲಿಟಿ ವಿಥ್ ಫೊಟೊನ ಎಮಿಸನ್ ಕಂಪ್ಯೂಟರೈಸ್ಡ್ ಟೊಮೊಗ್ರಾಫಿ (ಖಉಇ) ಪಾಸಿಟ್ರಾನ ಎಮಿಸನ್ ಟೊಮೊಗ್ರಾಫಿ (ಉಇ) ಮತ್ತು ರೆಡಿಯೋ ನೂಕ್ಲಿಯರ್ ಥೆರಪಿ ಕೇಂದ್ರವನ್ನು ತೆರೆದು ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಈ ಯಂತ್ರದಿಂದ ದೇಹದ ಯಾವ ಅಂಗ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಮಗ್ರವಾಗಿ ಪತ್ತೆ ಹಚ್ಚಬಹುದು. ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ ಇದೆ ಎನ್ನುವುದನ್ನು ತ್ವರಿತವಾಗಿ ಕಂಡು ಹಿಡಿಯಬಹುದು. ಇದು ರೋಗಪತ್ತೆ ಮಾಡುವುದಷ್ಟೆ ಅಲ್ಲದೇ ಚಿಕಿತ್ಸೆಗೂ ಅವಕಾಶವಿದೆ. ಹೃದಯದ ಮಾಂಸಖಂಡಗಳಲ್ಲಿ ರಕ್ತಪರಿಚಲನೆಯನ್ನು ವಿವರವಾಗಿ ತಿಳಿಯುವ ಮೂಲಕ ತಿಳಿದುಕೊಳ್ಳಬಹುದು. ಮಕ್ಕಳನ್ನೂ ರೋಗಪತ್ತೆಗೆ ಒಳಪಡಿಸಬಹುದಾಗಿದೆ ಎಂದು ರಾಜನಾಥಸಿಂಗ್ ಹೇಳಿದರು.

ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಶಾಸಕರಾದ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಅಮಿತ ಕೋರೆ, ಅನಿಲ್ ಪಟ್ಟೇದ, ಎಸ್.ಸಿ.ಮೆಟಗುಡ, ಅಶೋಕಣ್ಣ ಬಾಗೇವಾಡಿ, ಡಾ.ಎಸ್.ಸಾಧುನವರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಜಾಲಿ, ಡಾ.ವಿವೇಕ ಸಾವೋಜಿ ಹಾಗೂ ಡಾ.ರಶ್ಮಿ ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News