ಲಿಂಗಾಯತ ಪತ್ಯೇಕ ಧರ್ಮ ಆಂದೋಲನಕ್ಕಾಗಿ ಜ.23ರಂದು ವಿಶ್ವ ಲಿಂಗಾಯತ ಪರಿಷತ್ ಸ್ಥಾಪನೆ: ಜಾಮದಾರ್

Update: 2018-01-13 15:44 GMT

ಬೆಂಗಳೂರು, ಜ.13: ಲಿಂಗಾಯತ ಪತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವೀರಶೈವ ಮಹಾಸಭಾ ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ‘ವಿಶ್ವ ಲಿಂಗಾಯತ ಪರಿಷತ್’ ಅಸ್ತಿತ್ವಕ್ಕೆ ಬರುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲಿಂಗಾಯತ ಮುಖಂಡ ಜಾಮದಾರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪತ್ಯೇಕ ಧರ್ಮಕ್ಕೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳದೆ ಇರುವುದರಿಂದ ವಿಶ್ವ ಲಿಂಗಾಯತ ಪರಿಷತ್ ಸ್ಥಾಪನೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

 ಜ.23 ರಂದು ಮಠಾಧೀಶರು, ಧಾರ್ಮಿಕ ತಜ್ಞರು, ಯುವ ಮುಖಂಡರು ಎಲ್ಲರನ್ನೂ ಒಟ್ಟುಗೂಡಿಸಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾವೇಶ ನಡೆಸಲಿದ್ದೇವೆ. ಈ ವೇಳೆ ಎಲ್ಲರೊಂದಿಗೆ ಚಿಂತನ-ಮಂಥನ ಬಳಿಕ ಅಂದೇ ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಹೇಳಿದರು.

ಜನವರಿ ಒಳಗಾಗಿ ವಿಶ್ವ ಲಿಂಗಾಯತ ಪರಿಷತ್‌ಗೆ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ. ಜಿಲ್ಲೆ, ತಾಲೂಕು, ನಗರ, ಪಟ್ಟಣಗಳಲ್ಲಿ ಸಾವಿರಗಟ್ಟಲೆ ಲಿಂಗಾಯತ ಕಾರ್ಯಕರ್ತರಿದ್ದು, ಅವರ ಮೂಲಕ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ. ವಿಶ್ವಲಿಂಗಾಯತ ಪರಿಷತ್, ವೀರಶೈವ ಮಹಾಸಭಾ ರಚನೆಗಿಂತ ವಿಶಾಲವಾಗಿದೆ. ಇದರ ಕಾರ್ಯನಿರ್ವಹಣೆ ಕೂಡ ಭಿನ್ನವಾಗಿರುತ್ತದೆ ಎಂದು ಅವರು ಹೇಳಿದರು.

 113 ವರ್ಷಗಳ ಇಂತಿಹಾಸ ಹೊಂದಿರುವ ವೀರಶೈವ ಮಹಾಸಭಾ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಸ್ಥಾಪನೆಗೊಂಡಿತ್ತು. ಆದರೆ, ಲಿಂಗಾಯತ ಸಮುದಾಯದಲ್ಲಿ ಎಲ್ಲರನ್ನು ಒಳಗೊಂಡಂತೆ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಲಿಲ್ಲ. ಇಂತಹ ತಪ್ಪನ್ನು ತಿದ್ದಿಕೊಂಡು ವಿಶ್ವ ಲಿಂಗಾಯತ ಪರಿಷತ್ ಮೂಲಕ ಸಮುದಾಯವನ್ನು ಬಲಿಷ್ಟವಾಗಿ ಕಟ್ಟಲಾಗುವುದು ಎಂದು ಅವರು ಹೇಳಿದರು.

ವಿಶ್ವ ಲಿಂಗಾಯತ ಪರಿಷತ್‌ಗೆ ಮಠಾಧೀಶರ ಸಂಪೂರ್ಣ ಬೆಂಬಲವಿದೆ. ಅವರ ಸಲಹೆಗಳನ್ನು ಪಡೆದುಕೊಂಡು ಪರಿಷತ್ ಅಸ್ತಿತ್ವಕ್ಕೆ ಬರುತ್ತಿದೆ. ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿರುವ ಪದಾಧಿಕಾರಿಗಳ, ಸದಸ್ಯರು ವಿಶ್ವ ಲಿಂಗಾಯತ ಪರಿಷತ್‌ಗೆ ಸೇರಲು ಮುಕ್ತ ಅವಕಾಶವಿದೆ. ಆದರೆ, ಲಿಂಗಾಯತ ಧರ್ಮಕ್ಕೆ ಬಸವಣ್ಣನೆ ಮೂಲಪುರುಷ, ವಚನ ಶಾಸ್ತ್ರ ಮಾತ್ರ ನಮ್ಮ ಗ್ರಂಥ ಹಾಗೂ ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಅವರು ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದ ತಜ್ಞರ ಸಮಿತಿಗೆ ವಿಶ್ವ ಲಿಂಗಾಯತ್ ಪರಿಷತ್ ವಿಶೇಷ ವರದಿಯನ್ನು ಕೊಡುವುದಿಲ್ಲ. ಆದರೆ, ಈಗಾಗಲೆ ಸರಕಾರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದೇವೆ. ಅಗತ್ಯವಿದ್ದರೆ ಮತ್ತಷ್ಟು ಮಾಹಿತಿಯನ್ನು ಕೊಡಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಮುಖಂಡರಾದ ಡಾ.ಸಿ.ಜಯಣ್ಣ, ಜಿ.ಬಿ. ಪಾಟೀಲ್ ಉಪಸ್ಥಿತರಿದ್ದರು.

ವಿಶ್ವ ಲಿಂಗಾಯತ ಪರಿಷತ್‌ನಲ್ಲಿ ಬಸವ ಸೇನೆಯು ಯುವ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನಲ್ಲಿರುವ ಲಿಂಗಾಯತ ಧರ್ಮದ ವಕೀಲರು, ವೈದ್ಯರು, ವಿಚಾರವಂತರು, ನ್ಯಾಯಾಧೀಶರು, ಅಲ್ಲದೇ ವೃತ್ತಿನಿರತರ ವಿಶೇಷ ಘಟಕಗಳನ್ನು ರಚಿಸಲಿದ್ದೇವೆ. ಪ್ರತ್ಯೇಕ ಮಹಿಳಾ ವಿಭಾಗ ಇರಲಿದೆ.

-ಜಾಮದಾರ್ ,ಲಿಂಗಾಯತ ಮುಖಂಡ

ಪ್ರಮುಖ ಧ್ಯೇಯ

► ಲಿಂಗಾಯತ ಧರ್ಮಕ್ಕೆ ಬಸವಣ್ಣನೇ ಮೂಲಪುರಷ

► ವಚನ ಶಾಸ್ತ್ರವೇ ಲಿಂಗಾಯತರ ಗ್ರಂಥ

► ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News