ಬೆಂಗಳೂರು: ಕೆಎಸ್‌ಒಯುಗೆ ಮರು ಮಾನ್ಯತೆ ನೀಡಲು ಆಗ್ರಹಿಸಿ ಧರಣಿ

Update: 2018-01-13 18:32 GMT

ಬೆಂಗಳೂರು, ಜ.13: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮರು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ನಡೆಸಿದರು.

ಯುಜಿಸಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಪಡಿಸಿ ಎರಡು ವರ್ಷಗಳು ಕಳೆಯುತ್ತಿದ್ದರೂ ಮರು ಮಾನ್ಯತೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವುದೇ ಪ್ರಯತ್ನ ಮಾಡಿಲ್ಲ. ಹೀಗಾಗಿ, ಕೂಡಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೀಘ್ರವೇ ಮಾನ್ಯತೆ ದೊರಕಿಸಿಕೊಡಲು ಸರಕಾರಗಳು ಪ್ರಯತ್ನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಾದರೆ ಯುಜಿಸಿಯು ಸ್ವತಂತ್ರ ಆಯೋಗವೊಂದನ್ನು ರಚನೆ ಮಾಡಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ. ಅದರ ಬದಲು ಮೂರು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಹೀಗಾಗಿ, ಸರಕಾರಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

ಶಿಕ್ಷಣ ತಜ್ಞ ಪ್ರೊ.ನಿರಂಜನರಾಧ್ಯ ಮಾತನಾಡಿ, ವಿಶ್ವವಿದ್ಯಾಲಯ ಅನಗತ್ಯವಾಗಿ ಹಾಗೂ ಅನುಮತಿ ಪಡೆಯದೇ ಕೆಲ ತಾಂತ್ರಿಕ ಕೋರ್ಸ್‌ಗಳಿಗೆ ಅವಕಾಶ ನೀಡಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ, ಕೂಡಲೇ ಸರಕಾರ ಯುಜಿಸಿಗೆ ಅಗತ್ಯ ದಾಖಲೆ ಸಲ್ಲಿಸಿ ಮಾನ್ಯತೆಗೆ ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಹಾಗೂ ಸರಕಾರಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

 ತಾಂತ್ರಿಕ ಕೋರ್ಸ್‌ಗಳ ಮಾನ್ಯತೆ ನೀಡುವ ಪ್ರಾಧಿಕಾರಿಗಳ ಎಚ್ಚರಿಕೆ ನಿರ್ಲಕ್ಷಿಸಿ ಕೋರ್ಸ್‌ಗಳನ್ನು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಅತಂತ್ರವಾಗಿಸಿದೆ ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರಕ್ಕೆ ಕಾರಣರಾದ ಮುಕ್ತ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ, ಕುಲಸಚಿವರು ಹಾಗೂ ಇನ್ನಿತರೆ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಎಲ್ಲ ಅವ್ಯವಹಾರಗಳ ತನಿಖೆಗಾಗಿ ಆಯೋಗವನ್ನು ರಚಿಸಬೇಕು ಎಂದು ಅವರು ತಿಳಿಸಿದರು.

ಸಂಘಟನೆ ಅಧ್ಯಕ್ಷ ಮಹಮ್ಮದ್ ತಪ್ಸೀರ್ ಮಾತನಾಡಿ, ರೂಪಾಶ್ರೀ ಎಂಬ ವಿದ್ಯಾರ್ಥಿನಿಯು ಗ್ರಾಹಕ ನ್ಯಾಯಲಯದಲ್ಲಿ ದೂರು ದಾಖಲಿಸಿದ್ದ ಸಂದರ್ಭದಲ್ಲಿ ಎರಡು ಲಕ್ಷ ರೂ.ಗಳು ಪರಿಹಾರ ನೀಡುವಂತೆ ನ್ಯಾಯಾಲಯ ಕೆಎಸ್‌ಒಯುಗೆ ಆದೇಶ ನೀಡಿತ್ತು. ಕೇರಳದ ಕೆಎಸ್‌ಒಯು ಸಂತ್ರಸ್ಥ ವಿದ್ಯಾರ್ಥಿಗಳು ಕೇರಳ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದಾಗ ಅವರಿಗೂ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಎಲ್ಲ ಬೆಳವಣಿಗೆ ನಡುವೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಂದಿನ ಹೆಚ್ಚುವರಿ ಸರಕಾರದ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು.

ಆದರೆ, ಅಂದು ರಚನೆ ಮಾಡಿದ ಸಮಿತಿ ವರದಿಯ ಫಲಿತಾಂಶದ ಬಗ್ಗೆ ಇದುವರೆಗೂ ಸ್ಪಷ್ಟನೆ ನೀಡಿಲ್ಲ ಎಂದ ಅವರು, ಮುಕ್ತ ವಿವಿ ತನ್ನ ತಪ್ಪನ್ನು ಸರಿಪಡಿಸುವುದಾಗಿ ಪ್ರಮಾಣ ಪತ್ರ ನೀಡಿದೆ. ಆದರೆ, ಯುಜಿಸಿ ತನ್ನ ನಿರ್ಧಾರ ಬದಲಿಸುತ್ತಿಲ್ಲ. ಅಣ್ಣಾ ಮಲೈ ವಿವಿ ತಮಿಳುನಾಡಿನ ಹೈಕೋರ್ಟ್ ಮೂಲಕ ಮರು ಮಾನ್ಯತೆ ಪಡೆದಿದೆ. ಹೀಗಿದ್ದರೂ, ಕರ್ನಾಟಕ ಸರಕಾರ ಹಾಗೂ ಕೆಎಸ್‌ಒಯು ಮರು ಮಾನ್ಯತೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಿಎಫ್‌ಐನ ಕಾರ್ಯದರ್ಶಿ ಫಯಾಜ್ ದೊಡ್ಡಮನೆ, ಉಪಾಧ್ಯಕ್ಷ ಮಹಮ್ಮದ್ ಮುಸವೀರ್, ಮುಖಂಡರಾದ ರಿಯಾಜ್, ಮುಬಾರಕ್, ವಿದ್ಯಾರ್ಥಿಗಳಾದ ವೆಂಕಟೇಶ್, ಲೋಹಿತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News