ಲವ್‌ ಜಿಹಾದ್ ಆರೋಪ: ಸಂಘ ಪರಿವಾರದಿಂದ ನ್ಯಾಯಾಲಯದ ಆವರಣದಲ್ಲೇ ಗೂಂಡಾಗಿರಿ

Update: 2018-01-15 04:27 GMT

ಮೀರತ್, ಜ.15: ಲವ್‌ ಜಿಹಾದ್ ನಡೆಸುತ್ತಿದ್ದಾರೆ ಎಂದು ಆಪಾದಿಸಿ ಮುಸ್ಲಿಂ ಯುವಕ ಹಾಗೂ ಆತನ ಇಬ್ಬರು ಸಹೋದರರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಿಂದೂ ಯುವ ವಾಹಿನಿ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ಬಾಗ್‌ಪಥ್ ಎಂಬಲ್ಲಿ ನಡೆದಿದೆ.

ಪಂಜಾಬ್‌ನ ಹಿಂದೂ ಮಹಿಳೆಯನ್ನು ವಿವಾಹವಾಗಲು ಈ ಯುವಕ ಸಿದ್ಧತೆ ನಡೆಸಿದ್ದ ಎನ್ನುವುದು ಈತನ ಮೇಲಿರುವ ಆರೋಪ. ಯುವಕ ಹಾಗೂ ಆತನ ಸಹೋದರರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊ ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯಾಯಾಲಯದಿಂದ ಪೊಲೀಸ್ ವ್ಯಾನ್‌ನತ್ತ ಕರೆದೊಯ್ಯುತ್ತಿರುವಾಗ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಮನಸೋ ಇಚ್ಛೆ ಥಳಿಸುತ್ತಿದ್ದುದನ್ನು ಪೊಲೀಸರು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು.

ಆದರೆ ಮಹಿಳೆಯ ಮೇಲೆ ಹಲ್ಲೆ ಮಾಡಿಲ್ಲ. ಬದಲಾಗಿ ಹಿಂದೂಗಳಲ್ಲೇ ಉತ್ತಮ ಜೋಡಿಯನ್ನು ಹುಡುಕಿಕೊಳ್ಳುವುದು ಸಾಧ್ಯವಾಗಿಲ್ಲವೇ ಎಂದು ಆಕೆಯನ್ನು ನಿಂದಿಸುತ್ತಿದ್ದ ಮತ್ತೊಂದು ವೀಡಿಯೊ ಕೂಡಾ ಹರಿದಾಡುತ್ತಿದೆ.

ಈ ಇಬ್ಬರು ಪಂಜಾಬ್‌ನಲ್ಲಿ ಭೇಟಿಯಾಗಿದ್ದು, ಯುವಕ ಕಲೀಂ ಮೂಲತಃ ಸಹರಣ್‌ಪುರ ನಿವಾಸಿಯಾಗಿದ್ದು, ಮಹಿಳೆಯ ಮನೆಯ ಪಕ್ಕ ಸೆಲೂನ್ ನಡೆಸುತ್ತಿದ್ದ. ಫೇಸ್‌ಬುಕ್ ಮತ್ತು ವಾಟ್ಸ್ಯಾಪ್ ಮೂಲಕ ಪರಿಚಯವಾಗಿ 2016ರಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಸಂಬಂಧಕ್ಕೆ ಮನೆಯವರ ವಿರೋಧವಿದ್ದ ಹಿನ್ನೆಲೆಯಲ್ಲಿ ಪಂಜಾಬ್‌ನಿಂದ ಓಡಿಹೋಗಿ ವಿವಾಹಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ಭಾಗ್‌ಪಥ್ ನ್ಯಾಯಾಲಯದ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News