ಜುಲೈ 1ರಿಂದ ಜಾರಿಗೆ ಬರಲಿದೆ ಆಧಾರ್ ದೃಢೀಕರಣಕ್ಕೆ ಹೊಸ ವಿಧಾನ

Update: 2018-01-15 15:20 GMT

ಹೊಸದಿಲ್ಲಿ, ಜ. 15: ಆಧಾರ್ ದೃಢೀಕರಣ ಪ್ರಕ್ರಿಯೆಯಲ್ಲಿ ಕಣ್ಣ ಪಾಪೆ ಹಾಗೂ ಬೆರಳಚ್ಚು ಸ್ಕಾನಿಂಗ್‌ನಲ್ಲಿ ಸಮಸ್ಯೆ ಉಳ್ಳವರಿಗೆ ಮುಖಚಹರೆ ದೃಢೀಕರಣ ವ್ಯವಸ್ಥೆ ಪರಿಚಯಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನಿರ್ಧರಿಸಿದೆ.

ಈ ದೃಢೀಕರಣ ವ್ಯವಸ್ಥೆಯಲ್ಲಿ ಆಧಾರ್ ನೋಂದಣಿಯ ಸಂದರ್ಭ ವ್ಯಕ್ತಿಯ ಮುಖದ ಫೋಟೊವನ್ನು ಕೂಡ ತೆಗೆಯಲಾಗುವುದು. ಆಧಾರ್ ಸಂಖ್ಯೆ ಹೊಂದಿರುವವರ ಗುರುತು ಪರಿಶೀಲಿಸಲು ಕೂಡ ಮುಖಚಹರೆ ನೆರವಾಗಲಿದೆ.ಈ ನೂತನ ದೃಢೀಕರಣ ಅವಕಾಶ ಹಾಲಿ ಇರುವ ದೃಢೀಕರಣ ವಿಧಾನಗಳ ಜೊತೆಗೆ ಈ ವರ್ಷ ಜುಲೈ 1ರಿಂದ ಲಭ್ಯವಾಗಲಿದೆ.

ವೃದ್ಧಾಪ್ಯ, ಕಠಿಣ ಕೆಲಸ ಹಾಗೂ ಇತರ ಕಾರಣಗಳಿಂದ ಬೆರಳಚ್ಚು, ಕಣ್ಣಪಾಪೆಯ ಸಮಸ್ಯೆ ಇರುವವರಿಗೆ ಈ ನೂತನ ಮುಖಚಹರೆ ದೃಢೀಕರಣ ನೆರವಾಗಲಿದೆ. ಇದು ಅಗತ್ಯ ಇರುವವರಿಗೆ ಮಾತ್ರ ಲಭ್ಯವಾಗಲಿದೆ.

ಈಗಾಗಲೇ ಬೆರಳಚ್ಚು ದೃಢೀಕರಣ ಹಾಗೂ ಕಣ್ಣಪಾಪೆ ದೃಡೀಕರಣ ಎಂಬ ಎರಡು ರೀತಿ ಬಯೋಮೆಟ್ರಿಕ್ ದೃಢೀಕರಣಗಳಿಗೆ ಅವಕಾಶ ನೀಡಲಾಗಿದೆ. ದೃಢೀಕರಣದಲ್ಲಿ ಎಲ್ಲರನ್ನೂ ಅಂತರ್ಗತಗೊಳಿಸಲು ಮುಖಚಹರೆ ದೃಢೀಕರಣ ಅವಕಾಶವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಆದರೆ, ಬೆರಳಚ್ಚು ಅಥವಾ ಕಣ್ಣಪಾಪೆ ಅಥವಾ ಒಟಿಪಿಯಂತಹ ‘ಇನ್ನೂ ಒಂದು ದೃಢೀಕರಣ ಅಂಶ’ವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಮುಖಚಹರೆ ದೃಢೀಕರಣದ ಅವಕಾಶ ಲಭ್ಯವಾಗಲಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News