ಗೋವಾ-ಕರ್ನಾಟಕದ ನಡುವಿನ ಸೌಹಾರ್ದ ಸಂಬಂಧಕ್ಕೆ ಧಕ್ಕೆ ತಂದ ‘ಹರಾಮಿ’ ಹೇಳಿಕೆ

Update: 2018-01-16 04:07 GMT

ಒಬ್ಬ ಸಚಿವನಾಗಿ ಮಾತ್ರವಲ್ಲ, ಒಬ್ಬ ಭಾರತೀಯನಾಗಿ, ಒಬ್ಬ ಮನುಷ್ಯನಾಗಿ ಆಡಬಾರದ ಮಾತೊಂದನ್ನು ಗೋವಾದ ಸಚಿವ ವಿನೋದ್ ಪಾಳೇಕರ್ ಆಡಿದ್ದಾರೆ. ‘ಕರ್ನಾಟಕದವರೆಲ್ಲ ಹರಾಮಿಗಳು’ ಎನ್ನುವಂತಹ ಈ ಸಚಿವರ ಹೇಳಿಕೆ ಕರ್ನಾಟಕ ಸರಕಾರವನ್ನು ಉದ್ದೇಶಿಸಿ ಹೇಳಿರುವುದೋ, ರಾಜ್ಯ ಬಿಜೆಪಿಯ ನಾಯಕರನ್ನು ಗುರಿಯಿಟ್ಟು ಆಡಿರುವುದೋ ಅಥವಾ ಸಕಲ ಕನ್ನಡಿಗರನ್ನು ಉದ್ದೇಶಿಸಿ ಹೇಳಿರುವುದೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸಂಸ್ಕೃತಿಯನ್ನು ಗುತ್ತಿಗೆ ಪಡೆದುಕೊಂಡಿರುವ ಬಿಜೆಪಿ ಸರಕಾರ ಗೋವಾವನ್ನು ಆಳುತಿದೆ. ಸಚಿವರು ಬಳಸಿರುವ ‘ಹರಾಮಿ’ ಎನ್ನುವ ಮಾತಿನ ಬಗ್ಗೆ ಈವರೆಗೆ ಆ ಸರಕಾರ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಬಹುಶಃ ಗೋವಾ ಸರಕಾರದ ಮನದ ಮಾತನ್ನು ಸಚಿವರು ಆಡಿದ್ದಾರೆ ಎನ್ನುವುದನ್ನು ಊಹಿಸಲು ಪಾರಿಕ್ಕರ್ ವೌನವೇ ಸಾಕು. ಕನ್ನಡಿಗರ ಆತ್ಮಾಭಿಮಾನಕ್ಕೆ ತೀವ್ರವಾದ ಘಾಸಿಯನ್ನುಂಟು ಮಾಡಿದ ಹೇಳಿಕೆ ಇದು. ಇದನ್ನು ಸಕಲ ಕನ್ನಡಿಗರು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟ ಎಲ್ಲರೂ ಒಂದಾಗಿ ವಿರೋಧಿಸಬೇಕು. ಖಂಡಿತವಾಗಿಯೂ ಇದೊಂದು ಜನಾಂಗೀಯ ನಿಂದನೆಯ ಹೇಳಿಕೆಯಾಗಿದೆ.

ಕಾವೇರಿ ನೀರು ವಿವಾದ ಸಂದರ್ಭದಲ್ಲಿ ಸ್ಥಳೀಯ ತಮಿಳರ ವಿರುದ್ಧ ಆಕ್ರೋಶಗೈಯುವ, ಅವರಿಗೆ ಕೊಲೆ ಬೆದರಿಕೆಯೊಡ್ಡುವ ಸಂಘಟನೆಗಳ ಮುಖಂಡರಿಗೂ, ಈ ಸಚಿವರಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಗೋವಾ ಮತ್ತು ಕನ್ನಡಿಗರ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಗೋವಾದ ನಿರ್ವಸಿತರಿಗೆ ಹೇಗೆ ಕನ್ನಡ ನಾಡು ಆಶ್ರಯವನ್ನು ನೀಡಿದೆಯೋ, ಹಾಗೆಯೇ ಲಕ್ಷಾಂತರ ಕನ್ನಡಿಗರಿಗೆ ಗೋವಾ ಕೂಡ ಆಶ್ರಯವನ್ನು ನೀಡಿದೆ. ಪೋರ್ಚುಗೀಸರ ಆಡಳಿತದಲ್ಲಿ ನೊಂದು ಅಲ್ಲಿಂದ ವಲಸೆ ಬಂದ ಬೇರೆ ಬೇರೆ ಸಮುದಾಯಗಳು ಕರ್ನಾಟಕದಲ್ಲಿ ಹರಡಿಕೊಂಡಿವೆ. ಹಾಗೆಯೇ ಅಬ್ಬಕ್ಕ ದೇವಿಯ ಕಾಲದಲ್ಲಿ ಗೋವಾ ಮತ್ತು ಕರಾವಳಿಯ ನಡುವೆ ಕೊಡುಕೊಳ್ಳುವಿಕೆಯಿತ್ತು. ಗೋವಾದಿಂದ ಪೋರ್ಚುಗೀಸರನ್ನು ಓಡಿಸುವ ಸಂದರ್ಭದಲ್ಲೂ ಕರ್ನಾಟಕದ ಹೋರಾಟಗಾರರು ತಮ್ಮ ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಗೋವಾ ಪ್ರವಾಸೋದ್ಯಮವಾಗಿ ಬೆಳೆದಿದ್ದರೆ ಅದರಲ್ಲೂ ಕರ್ನಾಟಕದ ಪಾಲಿದೆ.ಗೋವಾದ ಹಲವು ಬೇಡಿಕೆಗಳು ಈಡೇರುವುದು ಕರ್ನಾಟಕದಿಂದ.

ವಾರದ ಹಿಂದೆ ಇಡೀ ಗೋವಾ ಮಾಂಸದ ಕೊರತೆಯಿಂದ ನರಳಿತು. ಇದು ಅಲ್ಲಿನ ಅರ್ಥವ್ಯವಸ್ಥೆಯ ಮೇಲೂ ಪರಿಣಾಮ ಬೀರಿತು. ಕರ್ನಾಟಕದಿಂದ ಪೂರೈಕೆಯಾಗುತ್ತಿರುವ ಬೀಫ್‌ನ ಬಲದಿಂದ ಅಲ್ಲ್ಲಿನ ಪ್ರವಾಸೋದ್ಯಮದ ಆರೋಗ್ಯ ಗಟ್ಟಿಯಾಗಿದೆ. ಬರೇ ಒಂದು ವಾರದ ಮಟ್ಟಿಗೆ ಕರ್ನಾಟಕದ ಗೋಮಾಂಸ ವ್ಯಾಪಾರಿಗಳು ತಾವು ಮಾಂಸ ಪೂರೈಸುವುದಿಲ್ಲ ಎಂದ ಕಾರಣಕ್ಕೆ ಗೋವಾದಲ್ಲಿ ಅಸ್ತವ್ಯಸ್ತವಾಯಿತು. ಪರಿಣಾಮವಾಗಿ, ಮುಖ್ಯಮಂತ್ರಿ ಪಾರಿಕ್ಕರ್ ಮಧ್ಯ ಪ್ರವೇಶಿಸಬೇಕಾಯಿತು. ಗೋವಾ ಮತ್ತು ಕರ್ನಾಟಕದ ನಡುವಿನ ಸಂಬಂಧ ಕೇವಲ ಬೀಫ್ ವ್ಯವಹಾರಕ್ಕಷ್ಟೇ ಸೀಮಿತವಲ್ಲ ಎನ್ನುವ ಅಂಶವನ್ನು ಅಲ್ಲಿನ ಸರಕಾರ ಗಮನಿಸಬೇಕು. ಇದೇ ಸಂದರ್ಭದಲ್ಲಿ ಗೋವಾ ಕೂಡ ಲಕ್ಷಾಂತರ ಕನ್ನಡಿಗರಿಗೆ ಆಶ್ರಯ ನೀಡಿದೆ. ಬಹುಸಂಖ್ಯೆಯ ಯುವಕರು ಅಲ್ಲಿ ನೆಲೆಸಿ ಬದುಕನ್ನು ಕಂಡುಕೊಂಡಿದ್ದಾರೆ. ಬೈನಾ ಬೀಚ್ ಕನ್ನಡಿಗರ ವಿರುದ್ಧ ಗೋವಾ ಆಗಾಗ ದೌರ್ಜನ್ಯಗಳನ್ನು ನಡೆಸುತ್ತಾ ಬಂದಿದೆ. ಇದು ಉಭಯ ರಾಜ್ಯಗಳ ಸಂಬಂಧಕ್ಕೆ ಹುಳಿ ಹಿಂಡುತ್ತಿತ್ತು.

ಪಾಶ್ಚಿಮಾತ್ಯ ಪ್ರವಾಸಿಗರಿಗೆ ರಾಜಹಾಸು ಹಾಸುವ ಗೋವಾ ಸರಕಾರ, ನೆರೆಯ ರಾಜ್ಯದವರೇ ಆಗಿರುವ ಕನ್ನಡಿಗರ ಗುಡಿಸಲುಗಳನ್ನು ನೆಲಸಮ ಮಾಡಿ ಅವರ ಜೊತೆಗೆ ಅಮಾನವೀಯವಾಗಿ ವರ್ತಿಸುತ್ತಾ ಬಂದಿದೆ. ಅಲ್ಲಿ ನೆಲೆಸಿದ ಬಡ ಕನ್ನಡಿಗರು ಇಡೀ ಗೋವಾವನ್ನು ಕೆಡಿಸಲು ಬಂದಿರುವವರೇನೋ ಎಂಬಂತೆ ಅವರೊಂದಿಗೆ ವ್ಯವಹರಿಸುತ್ತಿದೆ. ಇದೀಗ ಮಹಾದಾಯಿ ಯೋಜನೆ ಮತ್ತೊಮ್ಮೆ ಗೋವಾ ಮತ್ತು ಕನ್ನಡಿಗರ ನಡುವೆ ಅಸಮಾಧಾನವನ್ನು ಬಿತ್ತಿದೆ. ಆದರೆ ಈ ಅಸಮಾಧಾನ ಬಿತ್ತುವ ನೇತೃತ್ವವನ್ನು ಸರಕಾರ ನಡೆಸುವವರೇ ವಹಿಸಿದರೆ ಹೇಗೆ? ಮಹದಾಯಿ ಯೋಜನೆ ಯಾವುದೇ ಪ್ರವಾಸೋದ್ಯಮದ ದೃಷ್ಟಿಯಿಂದ ನಿರ್ಮಾಣವಾದುದು ಅಲ್ಲ. ಈ ನಾಡಿನ ರೈತರ ಹಿತಾಸಕ್ತಿಗೆ ಪೂರಕವಾದ ಯೋಜನೆ ಅದು. ಕೃಷಿಯ ಅವಶ್ಯಕತೆ ಮುಗಿದ ಬಳಿಕವಷ್ಟೇ ಇತರ ಕ್ಷೇತ್ರಗಳಿಗೆ ನೀರನ್ನು ಪೂರೈಸುವುದು ಜಲನೀತಿಯ ಭಾಗವೂ ಆಗಿದೆ. ಗೋವಾ ನೀರನ್ನು ಅಪೇಕ್ಷಿಸುವುದು ಕೃಷಿ ಕಾರಣಕ್ಕಾಗಿ ಅಲ್ಲ. ಇಂದು ಮಹದಾಯಿ ಯೋಜನೆಯನ್ನು ಟೀಕಿಸುವ ಭರದಲ್ಲಿ ಸಚವರು ಹರಾಮಿಗಳು ಎಂದು ಕರ್ನಾಟಕದ ರೈತರನ್ನು ಉದ್ದೇಶಿಸಿ ಆಡಿದ್ದಾರೆ. ಈ ಮೂಲಕ ಇಡೀ ಕರ್ನಾಟಕವನ್ನೇ ಗೋವಾದ ವಿರುದ್ಧ ಎತ್ತಿ ಕಟ್ಟಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಕುರಿತಂತೆ ಎಳ್ಳಿನಷ್ಟನ್ನಾದರೂ ಆ ಸಚಿವ ಓದಿಕೊಂಡಿದ್ದಿದ್ದರೆ ಕನ್ನಡಿಗರ ಕುರಿತಂತೆ ಇಂತಹದೊಂದು ಹೇಳಿಕೆಯನ್ನು ನೀಡುತ್ತಿರಲಿಲ್ಲ. ವಿಪರ್ಯಾಸವೆಂದರೆ, ಈ ಹೇಳಿಕೆಯನ್ನು ಮೊತ್ತ ಮೊದಲು ರಾಜ್ಯ ಬಿಜೆಪಿಯೇ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಬೇಕಾಗಿತ್ತು. ಯಾಕೆಂದರೆ ಗೋವಾದಲ್ಲಿರುವುದು ಬಿಜೆಪಿ ಸರಕಾರ. ಸಚಿವನ ಹೇಳಿಕೆ ನೇರವಾಗಿ ರಾಜ್ಯ ಬಿಜೆಪಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಆದರೆ ಯಡಿಯೂರಪ್ಪರನ್ನು ಹೊರತು ಪಡಿಸಿದ ಉಳಿದೆಲ್ಲ ನಾಯಕರು ಈ ಬಗ್ಗೆ ವೌನತಾಳಿದ್ದಾರೆ. ಯಡಿಯೂರಪ್ಪ ಕೂಡ ಒಲ್ಲದ ಮನಸಿನಲ್ಲಿ ಗೋವಾ ಸಚಿವರ ವಿರುದ್ಧ ಮಾತನಾಡಿದ್ದಾರೆ.

 ಮಹದಾಯಿ ಹೋರಾಟದ ಹಾದಿಯನ್ನು ತಪ್ಪಿಸಿದ ಖ್ಯಾತಿಯೂ ಬಿಜೆಪಿಯ ಮುಖಂಡರಾಗಿರುವ ಯಡಿಯೂರಪ್ಪರಿಗೇ ಸೇರಬೇಕು. ಕಳೆದ ವರ್ಷ ಇದೇ ಯಡಿಯೂರಪ್ಪ ಮಹಾದಾಯಿ ಯೋಜನೆಯನ್ನು ಬಿಜೆಪಿ ನಾಯಕರ ಜೊತೆಗೆ ಮಾತನಾಡಿ ವರ್ಷಾಂತ್ಯದೊಳಗೆ ಪರಿಹರಿಸುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದರು. ಅಮಿತ್ ಶಾ ಅವರ ಮಧ್ಯಸ್ಥಿತಿಕೆಯಲ್ಲಿ ಪಾರಿಕ್ಕರ್ ಜೊತೆಗೆ ಮಹಾದಾಯಿ ಯೋಜನೆಯ ಕುರಿತಂತೆ ಮಾತನಾಡಿ ಒಂದು ಪರಿಹಾರವನ್ನು ಕಂಡುಕೊಳ್ಳುವುದು ಅವರ ಉದ್ದೇಶವಾಗಿತ್ತು.ಮತ್ತು ಆ ಹೆಸರಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಯಾಚಿಸುವ ಗುರಿ ಹೊಂದಿದ್ದರು. ರಾಜ್ಯ ರಾಜಕೀಯದಲ್ಲಿ ಹಲವು ದಶಕಗಳಿಂದ ಪಳಗಿರುವ ಯಡಿಯೂರಪ್ಪರು ಒಂದಿಷ್ಟು ಮುತ್ಸದ್ದಿತನವನ್ನು ಉಳಿಸಿಕೊಂಡಿದ್ದರೂ ಇಂತಹ ಸಾಹಸಕ್ಕೆ ಇಳಿಯುತ್ತಿರಲಿಲ್ಲ. ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಬೆಳೆಯುವುದು ಸ್ವತಃ ಬಿಜೆಪಿಯ ನಾಯಕರಿಗೇ ಇಷ್ಟವಿಲ್ಲ. ಹೀಗಿರುವಾಗ, ಕರ್ನಾಟಕ ಬಿಜೆಪಿಯ ಉಳಿವಿಗಾಗಿ ಗೋವಾದ ಬಿಜೆಪಿಯನ್ನು ಬಲಿಕೊಡಲು ಪಾರಿಕ್ಕರ್ ಸಿದ್ಧರಿರುತ್ತಾರೆಯೇ? ಇಷ್ಟಕ್ಕೂ ಯೋಜನೆಯ ಕುರಿತಂತೆ ಮಾತುಕತೆ ನಡೆಯಬೇಕಾದುದು ಗೋವಾ ಮುಖ್ಯಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಯ ನಡುವೆ. ಬಿಜೆಪಿ ನಾಯಕರೇ ಕುಳಿತು ಬಗೆ ಹರಿಸಲು ಮಹಾದಾಯಿ ಯೋಜನೆಯೆನ್ನುವುದು ಬಳ್ಳಾರಿ ಗಣಿದೊರೆಗಳ ಸೂಟ್‌ಕೇಸ್ ಹಣ ಹಂಚಿಕೊಂಡಷ್ಟು ಸರಳವಲ್ಲ. ಅದಕ್ಕಾಗಿ ಮಂಡಳಿ ರಚನೆಯಾಗಿದೆ. ಇತ್ಯರ್ಥ ನಡೆಸಲು ಅದರದ್ದೇ ಆದ ಪ್ರಕ್ರಿಯೆಗಳಿವೆ. ಪಾರಿಕ್ಕರ್‌ರಿಗೆ ಯಡಿಯೂರಪ್ಪರು ಪತ್ರ ಬರೆದಾಕ್ಷಣ ಸಮಸ್ಯೆ ಈಡೇರುವುದಿಲ್ಲ. ರಾಜ್ಯ ಬಿಜೆಪಿ ನಾಯಕರ ಇಂತಹ ಬಾಲಿಶ ನಡವಳಿಕೆಗಳೇ ಇಂದು, ಗೋವಾದ ಸಚಿವರಿಂದ ಇಂತಹ ಹೀನಾಯ ಮಾತುಗಳನ್ನಾಡಿಸಿದೆ. ಈ ಮಾತಿಗಾಗಿ ಗೋವಾ ಸಚಿವರು ತಕ್ಷಣ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಕನ್ನಡಿಗರು ಬಿಜೆಪಿಯ ವಿರುದ್ಧ ಮತ ಚಲಾಯಿಸಿ ‘ತಾವು ಹರಾಮಿಗಳಲ್ಲ’ ಎನ್ನುವುದನ್ನು ಗೋವಾ ಸರಕಾರಕ್ಕೂ, ರಾಜ್ಯ ಬಿಜೆಪಿ ಮುಖಂಡರಿಗೂ ಮನವರಿಕೆ ಮಾಡಿಸುವಂತಹ ಸ್ಥಿತಿ ಎದುರಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News