ನ್ಯಾ.ಲೋಯಾ ಸಾವು ಪ್ರಕರಣ: ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸಿದ ಮಹಾರಾಷ್ಟ್ರ ಸರಕಾರ

Update: 2018-01-16 09:14 GMT

ಹೊಸದಿಲ್ಲಿ, ಜ.16: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶರಾಗಿದ್ದ ಜಸ್ಟಿಸ್ ಬಿ.ಎಚ್. ಲೋಯಾ ಸಾವಿನ ಪ್ರಕರಣದಲ್ಲಿ ಅಪೀಲುದಾರರು ವಾಸ್ತವಗಳನ್ನು ಹಾಗೂ ವೈದ್ಯಕೀಯ ವರದಿ ಸಹಿತ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್  ಮಂಗಳವಾರ ಮಹಾರಾಷ್ಟ್ರ ಸರಕಾರಕ್ಕೆ ತಿಳಿಸಿದೆ.

ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯಾ ಸಾವಿನ ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅಪೀಲನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಕಳೆದ ಗುರುವಾರ  ಒಪ್ಪಿಕೊಂಡಿತ್ತು. ಲೋಯಾ ಅವರ ಸಾವು ಶಂಕಾಸ್ಪದ ಎಂದು ಅಪೀಲಿನಲ್ಲಿ ತಿಳಿಸಲಾಗಿತ್ತು. ಪತ್ರಕರ್ತ ಬಂಧುರಾಜ್ ಸಂಭಾಜಿ ಹಾಗೂ ರಾಜಕೀಯ ಕಾರ್ಯಕರ್ತ ತೆಹ್ಸನೀನ್ ಪೂನಾವಾಲ ಸಲ್ಲಿಸಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರಿಗೆ ನೀಡುವ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಯಾವುದೇ ಆಕ್ಷೇಪವಿಲ್ಲವಾದರೂ ಆ ದಾಖಲೆಗಳನ್ನು ಬಹಿರಂಗಗೊಳಿಸಬಾರದು ಎಂದು ಮಹಾರಾಷ್ಟ್ರ ಸರಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಸುಪ್ರೀಂ ಕೋರ್ಟಿಗೆ ತಿಳಿಸಿದರು.

ಅದಕ್ಕೂ ಮುಂಚೆ ಸುಪ್ರೀಂ ಕೋರ್ಟಿನ ಕಳೆದ ಗುರುವಾರದ ಆದೇಶದಂತೆ ಮಹಾರಾಷ್ಟ್ರ ಸರಕಾರವು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೀಲ್ ಮಾಡಲ್ಪಟ್ಟ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಹಸ್ತಾಂತರಿಸಿತು.

ಪ್ರಕರಣದ ವಿಚಾರಣೆಯನ್ನು ಒಂದು ವಾರ ಮುಂದೂಡಿದ ನ್ಯಾಯಾಲಯ ಅಪೀಲುದಾರರಿಗೆ  ಅಗತ್ಯವಿದ್ದರೆ ಹೆಚ್ಚುವರಿ ದಾಖಲೆ ಸಲ್ಲಿಸಬಹುದು ಎಂದು ಹೇಳಿದೆ.

ಲೋಯಾ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಹಿರಿಯ ನ್ಯಾಯಾಧೀಶರುಗಳನ್ನು ಕಡೆಗಣಿಸಿ  ಬೇರೆಯೇ ಪೀಠಕ್ಕೆ ವಹಿಸಿದ ನಂತರ ಕಳೆದ ಶುಕ್ರವಾರ ನಾಲ್ಕು ಹಿರಿಯ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಸಿಡಿದೆದ್ದು ಪತ್ರಿಕಾಗೋಷ್ಠಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರದ ಬೆಳವಣಿಗೆಯಲ್ಲಿ ಜಸ್ಟಿಸ್ ಲೋಯಾ ಅವರ ಪುತ್ರ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ತಮ್ಮ ಕುಟುಂಬವನ್ನು ಈ ಪ್ರಕರಣ ಸಂಬಂಧ ಕಿರುಕುಳ ನೀಡದಂತೆ ಹಾಗೂ ತಂದೆಯ ಸಾವಿನ  ಬಗ್ಗೆ ತಮಗೆ ಯಾವುದೇ ಸಂಶಯವಿಲ್ಲವೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News