ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ದೂರು ನೀಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್

Update: 2018-01-16 16:55 GMT
ಪ್ರಶಾಂತ್ ಭೂಷಣ್

ಹೊಸದಿಲ್ಲಿ,ಜ.16: ಹಿರಿಯ ನ್ಯಾಯವಾದಿ ಹಾಗೂ ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಿಲಿಟಿ ಆ್ಯಂಡ್ ರಿಫಾರ್ಮ್ಸ್‌ನ ಸಂಚಾಲಕ ಪ್ರಶಾಂತ್ ಭೂಷಣ್ ಅವರು ಲಕ್ನೋ ಮೆಡಿಕಲ್ ಕಾಲೇಜು ಹಗರಣದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸೋಮವಾರ ದೂರೊಂದನ್ನು ದಾಖಲಿಸಿದ್ದಾರೆ. ಅವರು ದೂರಿನ ಪ್ರತಿಗಳನ್ನು ಕಳೆದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ನಾಲ್ವರು ಹಿರಿಯ ನ್ಯಾಯಾಧೀಶರು ಮತ್ತು ನ್ಯಾ.ಎ.ಕೆ.ಸಿಕ್ರಿ ಅವರಿಗೂ ಕಳುಹಿಸಿದ್ದಾರೆ.

                                (ದೀಪಕ್ ಮಿಶ್ರಾ)

ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದುರ್ವರ್ತನೆಯ ವಿವಿಧ ಆರೋಪಗಳಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಇಡೀ ಸಂಚು ಮತ್ತು ಯೋಜನೆಯು ಪ್ರಸಾದ್ ಮೆಡಿಕಲ್ ಟ್ರಸ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡುವ ಮತ್ತು ಅವರ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿತ್ತು ಎಂದು ಸಿಬಿಐನ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಪೀಠದ ನೇತೃತ್ವವು ನ್ಯಾ.ಮಿಶ್ರಾ ಅವರದ್ದಾಗಿತ್ತು. ಇಂತಹ ಸನ್ನಿವೇಶದಲ್ಲಿ ಅವರು ಹಿತಾಸಕ್ತಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಹೀಗಾಗಿ ಅವರೇ ಈ ಪ್ರಕರಣವನ್ನು ನಿರ್ವಹಿಸುವಂತಿರಲಿಲ್ಲ ಮತ್ತು ಆಡಳಿತಾತ್ಮಕವಾಗಿಯೂ ವಿಚಾರಣೆಯನ್ನು ನಿರ್ದಿಷ್ಟ ಪೀಠಕ್ಕೆ ವಹಿಸುವಂತಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ಸಂಚಿನಲ್ಲಿ ಮಿಶ್ರಾ ಭಾಗಿಯಾಗಿದ್ದರು ಎನ್ನುವುದಕ್ಕೆ ನಿರ್ಧಾರಾತ್ಮಕ ಸಾಕ್ಷಗಳು ಇಲ್ಲವಾದರೂ ಸಮಗ್ರ ತನಿಖೆಯು ಅಗತ್ಯವಾಗಿದೆ ಎಂದಿರುವ ಭೂಷಣ್, ಇಂತಹ ವಿಷಯಗಳು ನ್ಯಾಯಾಲಯದ ಘನತೆಗೆ ಕಳಂಕವನ್ನುಂಟು ಮಾಡಿವೆ ಮತ್ತು ನ್ಯಾಯಾಂಗಕ್ಕೆ ಅಗೌರವವನ್ನು ತಂದಿವೆ ಎಂದಿದ್ದಾರೆ.

ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧದ ದೂರುಗಳ ತನಿಖೆಗಾಗಿರುವ ನ್ಯಾಯಾಲಯದ ‘ಇನ್-ಹೌಸ್’ ವ್ಯವಸ್ಥೆಯಡಿ ಈ ದೂರನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News