ಅವಕಾಶ ವಂಚಿತರಿಗೆ ಕೌಶಲಾಭಿವೃದ್ಧಿ ಅಗತ್ಯ: ಡಾ.ಎಚ್.ಶಿವಣ್ಣ

Update: 2018-01-17 12:34 GMT

ಬೆಂಗಳೂರು, ಜ.17: ಶಿಕ್ಷಣದಿಂದ ವಂಚಿತರಾದವರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ಕಾರ್ಯಕ್ರಮವೇ ಕೌಶಲಾಭಿವೃದ್ಧಿಯಾಗಿದೆ. ಹೀಗಾಗಿ ಅವಕಾಶ ವಂಚಿತ ಪ್ರತಿಯೊಬ್ಬರಿಗೂ ಕೌಶಲ ಕುರಿತು ತರಬೇತಿ ಅಗತ್ಯವಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ ತಿಳಿಸಿದರು.

ಬುಧವಾರ ಕೃಷಿ ವಿವಿಯಲ್ಲಿ ಭಾರತ ಕೃಷಿ ಕೌಶಲ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ವಂಚಿತರಾದವರಿಗೆ ಆರ್ಥಿಕ ಭದ್ರತೆ ಒದಗಿಸಲು ಕೌಶಲ್ಯಾಭಿವೃದ್ಧಿ ಅಗತ್ಯವಾಗಿರುತ್ತದೆ ಎಂದು ತಿಳಿಸಿದರು.

ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ.60ರಿಂದ 80ರಷ್ಟು ಕೌಶಲಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಶೇ.2.5ರಷ್ಟು ಮಾತ್ರ ಕೌಶಲಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಮ್ಮಲ್ಲಿ ಅನಕ್ಷರಸ್ಥರ ಸಂಖ್ಯೆಯೆ ಬಹಳಷ್ಟು ಇರುವಾಗ ಕೌಶಲಾಭಿವೃದ್ಧಿ ಆದ್ಯತೆ ನೀಡಬೇಕಾಗಿತ್ತು. ವಿಪರ್ಯಾಸವೆಂದರೆ ಕೇಂದ್ರ ಸರಕಾರ ಈ ಕುರಿತು ಚಿಂತಿಸುತ್ತಿಲ್ಲವೆಂದು ವಿಷಾದಿಸಿದರು.

ಜಗತ್ತಿನಲ್ಲಿ ಮುಂದುವರೆದ ದೇಶಗಳಿಗೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದುಳಿದಿದೆ. ಈ ಕುರಿತು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಪರಿಣಾಮಕಾರಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಕೃಷಿ ಕೌಶಲ ಪರಿಷತ್‌ನ ಸಲಹೆಗಾರರಾದ ಡಾ.ಕೆ.ರವಿಕುಮಾರ್, ಡಾ.ಆರ್.ಸುರೇಶ್, ಎಟಿಎಂಎ ಸಂಸ್ಥೆಯ ಡಾ.ಎನ್.ಬಸವರಾಜ್, ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಂ.ನಟರಾಜು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News