ಮಾನಹರಣಗಳ ವಿರುದ್ಧ ಪ್ರತಿಭಟಿಸಲೂ ಮಾನದಂಡ

Update: 2018-01-19 04:10 GMT

ಹರ್ಯಾಣದಲ್ಲಿ ದಲಿತ ಬಾಲಕಿಯ ಮೇಲೆ ನಡೆದಿರುವ ಬರ್ಬರ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಮೂಲೆಗುಂಪಾಗುವ ಎಲ್ಲ ಸಾಧ್ಯತೆಗಳೂ ಕಾಣಿಸಿಕೊಂಡಿದೆ. ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣಕ್ಕಿಂತಲೂ ಭೀಕರವಾದ ಘಟನೆ ಇದಾಗಿದ್ದರೂ, ದೇಶದಲ್ಲಿ ಇನ್ನೂ ಮೊಂಬತ್ತಿಗಳು ಉರಿದ ಸುದ್ದಿ ಎಲ್ಲೂ ಕೇಳಿಬಂದಿಲ್ಲ. ಕಳೆದ ಶನಿವಾರ ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಶವವೊಂದು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಮಾತ್ರವಲ್ಲ, ಅತ್ಯಾಚಾರ ನಡೆಸುವುದರ ಜೊತೆಗೆ ಪೈಶಾಚಿಕ ರೀತಿಯಲ್ಲಿ ಈಕೆಗೆ ಚಿತ್ರ ಹಿಂಸೆ ನೀಡಲಾಗಿದೆ. ಆಕೆಯ ಗುಪ್ತಾಂಗಕ್ಕೆ ಮಾರಕ ಅಸ್ತ್ರಗಳಿಂದ ಗಾಯ ಮಾಡಿರುವುದರಿಂದ ಆಂತರಿಕ ಭಾಗಗಳೂ ಜರ್ಜರಿತಗೊಂಡಿವೆ. ಯಾವುದೇ ರೀತಿಯಲ್ಲಿ ನೋಡಿದರೂ ಇದು ನಿರ್ಭಯಾ ಪ್ರಕರಣಕ್ಕಿಂತಲೂ ಘೋರವಾಗಿದೆ. ಆದರೆ ಈ ಹಿಂದೆ ದಿಲ್ಲಿಯಲ್ಲಿ ನಡೆದ ಪ್ರಕರಣದಲ್ಲಿ ಕಾಣಿಸಿಕೊಂಡ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ, ಈ ಪ್ರಕರಣದಲ್ಲಿ ಕಂಡು ಬಂದಿಲ್ಲ.

ಇಲ್ಲಿ ನಡೆದಿರುವು ಎಳೆ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಬರ್ಬರ ಅತ್ಯಾಚಾರ ಪ್ರಕರಣವಾಗಿರುವುದರಿಂದ ನಿರ್ಭಯಾ ಪ್ರಕರಣಕ್ಕಿಂತ ಹೆಚ್ಚು ಸುದ್ದಿ ಮಾಡಬೇಕಾಗಿತ್ತು. ಆದರೆ ದಿಲ್ಲಿಯ ಪ್ರಕರಣಕ್ಕೆ ತಲ್ಲಣಗೊಂಡ ದೇಶ, ಹರ್ಯಾಣದ ಮೂಲೆಯಲ್ಲಿ ನಡೆದ ಬರ್ಬರ ಘಟನೆಗೆ ಗಾಢ ವೌನವನ್ನು ತಳೆದಿದೆ. ರಾಜಕೀಯ ನಾಯಕರು ಈ ದಿಕ್ಕಿಗೆ ಕಣ್ಣನ್ನೂ ಹಾಯಿಸಿಲ್ಲ. ಜೊತೆಗೆ ಬಾಲಕಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಗೆ ಸಂಬಂಧಿಸಿದ ತನಿಖೆ ಆರಂಭದಲ್ಲೇ ಎಡವಿದೆ. ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಓರ್ವ ಪಿಯುಸಿ ವಿದ್ಯಾರ್ಥಿಯನ್ನು ಪೊಲೀಸರು ಆರೋಪಿ ಎಂದು ಘೋಷಿಸಿದರು. ಕೆಲವರನ್ನು ತನಿಖೆಯ ಹೆಸರಿನಲ್ಲಿ ವಶಕ್ಕೂ ತೆಗೆದುಕೊಂಡು ವಿಚಾರಣೆಯ ಪ್ರಹಸನ ನಡೆಸಿದರು. ಇದೀಗ ಆರೋಪಿ ಎಂದು ಶಂಕಿಸಲ್ಪಟ್ಟು ವಶಕ್ಕೆ ತೆಗೆದುಕೊಂಡ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಮೃತದೇಹ ಸಮೀಪದ ಕಾಲುವೆಯೊಂದರಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಪರ್ಯಾಸವೆಂದರೆ ಪೊಲೀಸರು ಈ ಸಾವಿನ ಕುರಿತಂತೆಯೂ ಸ್ಪಷ್ಟವಾಗಿ ಮಾತನಾಡುತ್ತಿಲ್ಲ.

ಇದೊಂದು ‘ಮಾರ್ಯಾದಾ ಹತ್ಯೆ’ಯಾಗಿರಬಹುದು, ಹುಡುಗನಿಗೂ ಹುಡುಗಿಗೂ ಸಂಬಂಧ ಇದ್ದಿರಬಹುದು ಎಂಬಿತ್ಯಾದಿ ಹೇಳಿಕೆಗಳನ್ನು ಪೊಲೀಸರು ನೀಡುತ್ತಿದ್ದಾರೆ. ಇಡೀ ಪ್ರಕರಣವನ್ನು ಒಬ್ಬ ಹುಡುಗನ ತಲೆಗೆ ಕಟ್ಟಿ ಮುಗಿಸಿ ಬಿಡುವ ಆತುರದಲ್ಲಿದಂತೆ ಕಾಣುತ್ತದೆ. ಬಾಲಕಿಯ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆಯಷ್ಟೇ ನಡೆದಿರುವುದಲ್ಲ. ಬಾಲಕಿಯ ಮೇಲೆ ಕ್ರೌರ್ಯದ ಪರಮಾವಧಿಯನ್ನು ಮೆರೆದಿದ್ದಾರೆ ದುಷ್ಕರ್ಮಿಗಳು. ಇದನ್ನು ಓರ್ವ ಹುಡುಗ ಮಾತ್ರ ಮಾಡುವ ಸಾಧ್ಯತೆಯಂತೂ ಇಲ್ಲ. ಹಲವರು ಭಾಗವಹಿಸಿರುವ ಸಾಧ್ಯತೆಗಳು ಕಾಣುತ್ತದೆ. ಹುಡುಗನೂ ಅತ್ಯಾಚಾರ ಹತ್ಯೆಯಲ್ಲಿ ಭಾಗವಹಿಸಿರಬಹುದಾದರೂ, ಆತ ಇತರರ ಹೆಸರನ್ನು ಬಾಯಿ ಬಿಡುವ ಸಾಧ್ಯತೆಗಳಿರುವುದರಿಂದ ದುಷ್ಕರ್ಮಿಗಳು ಈತನನ್ನೂ ಬರ್ಬರವಾಗಿ ಹತ್ಯೆಗೈದಿರುವ ಸಾಧ್ಯತೆಗಳು ಕಾಣಿಸುತ್ತ್ತಿದೆ. ಹುಡುಗನ ಹತ್ಯೆಯನ್ನು ಯಾರು ಮಾಡಿದ್ದಾರೆ ಎನ್ನುವುದರ ಬಗ್ಗೆಯೂ ಪೊಲೀಸರು ಸ್ಪಷ್ಟ ಹೇಳಿಕೆಗಳನ್ನು ನೀಡುತ್ತಿಲ್ಲ. ಆರೋಪಿಗಳನ್ನು ರಕ್ಷಿಸುವ ಭಾಗವಾಗಿ ಪೊಲೀಸರ ಸಹಕಾರದಿಂದಲೇ ಬಾಲಕನ ಹತ್ಯೆ ನಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಮೇಲ್ನೋಟಕ್ಕೆ ಪೊಲೀಸರು ಯಾರನ್ನೋ ರಕ್ಷಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಬಾಲಕಿ ಅತ್ಯಾಚಾರಕ್ಕೀಡಾಗಿ ಹತ್ಯೆಗೊಂಡ ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಆರೋಪಿಗಳಲ್ಲಿ ಒಬ್ಬ ಎಂದು ಶಂಕಿಸಿದ್ದ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಪ್ರಕರಣದ ಆಳವನ್ನು ತಿಳಿಸುತ್ತದೆ ಅಥವಾ ಈ ವಿದ್ಯಾರ್ಥಿ ಪೊಲೀಸರ ಚಿತ್ರಹಿಂಸೆಗೆ ಬಲಿಯಾದನೇ? ಲಾಕಪ್‌ಡೆತ್‌ನ್ನು ಮುಚ್ಚಿ ಹಾಕಲು ಈ ರೀತಿಯ ಕತೆಯನ್ನು ಹೇಳುತ್ತಿದ್ದಾರೆಯೇ? ಒಟ್ಟಿನಲ್ಲಿ ಇಡೀ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ವಿಚಾರಣೆಗೊಳಪಡುವ ಎಲ್ಲ ಅಗತ್ಯಗಳು ಎದ್ದು ಕಾಣುತ್ತದೆ. ಹರ್ಯಾಣದ ‘ನಿರ್ಭಯಾ ಪ್ರಕರಣ’ದಲ್ಲಿ ಒಂದು ಸಾಬೀತಾಗಿದೆ. ಈ ದೇಶದಲ್ಲಿ ಹೆಣ್ಣಿನ ಮೇಲೆ ಬರ್ಬರ ಅತ್ಯಾಚಾರಗೈದು ಆಕೆಯ ಕೊಲೆ ನಡೆದರೆ ಅದರ ವಿರುದ್ಧ ಮಾಧ್ಯಮಗಳು ಮತ್ತು ‘ನಾಗರಿಕರು’ ಧ್ವನಿಯೆತ್ತಲು ಸಂತ್ರಸ್ತ ಮಹಿಳೆಗೆ ಕೆಲವೊಂದು ಅರ್ಹತೆಗಳು ಬೇಕಾಗುತ್ತವೆ.

ಮುಖ್ಯವಾಗಿ ಹತ್ಯೆ, ಅತ್ಯಾಚಾರ ವಿದ್ಯಾವಂತರ ಮೇಲೆ ಅಂದರೆ ಐಟಿ, ಬಿಟಿಯಂತಹ ಸಂಸ್ಥೆಯ ಸಿಬ್ಬಂದಿಯ ಮೇಲೆ ನಡೆದಾಗ ಮಾತ್ರ ದೇಶ ನಾಚಿಕೊಳ್ಳುತ್ತದೆ. ಹಾಗೆಯೇ ಸಂತ್ರಸ್ತರು ಶ್ರೀಮಂತರು ಮತ್ತು ಮೇಲ್ಜಾತಿಗೆ ಸೇರಿದವರಾಗಿರುವುದೂ ಅಗತ್ಯ. ಆಗ ಆ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಲು ಅರ್ಹವಾಗುತ್ತದೆ. ಸರಕಾರ ತರಾಟೆಗೆ ಒಳಗಾಗುತ್ತದೆ. ಅಂತಹದ್ದೇ ಘಟನೆ ಗ್ರಾಮೀಣ ಪ್ರದೇಶದಲ್ಲಿ, ಒಬ್ಬ ಕೆಳಜಾತಿಯ ತರುಣಿಯ ಮೇಲೆ ನಡೆದಾಗ ಅದರ ವಿರುದ್ಧ ಒಂದು ಮೊಂಬತ್ತಿಯೂ ಉರಿಯುವುದಿಲ್ಲ. ಯಾವ ಮಹಿಳಾವಾದಿಗಳೂ ‘ಹರ್ಯಾಣ ಚಲೋ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಕನಿಷ್ಠ ರಾಜ್ಯದ ಮುಖ್ಯಮಂತ್ರಿಗೂ ಅದು ಖಂಡಿಸಬೇಕಾದ ವಿಚಾರವೆನಿಸುವುದಿಲ್ಲ. ಈ ಕಾರಣದಿಂದಲೇ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳು ಅತ್ಯಾಚಾರಗಳ ತವರು ಎಣಿಸಿಕೊಳ್ಳುತ್ತಿರುವುದು.

ಈ ಮೂರೂ ರಾಜ್ಯಗಳಲ್ಲಿ ಸಂಸ್ಕೃತಿಯನ್ನು ಗುತ್ತಿಗೆ ತೆಗೆದುಕೊಂಡ ಪಕ್ಷದ ಸರಕಾರವಿದೆಯಾದರೂ, ಅದರ ನೇತಾರರಿಗೆ ನಾಚಿಕೆಯಾಗಿಲ್ಲ. ಯಾಕೆಂದರೆ ಈ ಸಂತ್ರಸ್ತರು ಇರುವುದೇ ಅತ್ಯಾಚಾರಗೀಡಾಗುವುದಕ್ಕೆ ಮತ್ತು ಹತ್ಯೆಗೀಡಾಗುವುದಕ್ಕೆ. ಕರ್ನಾಟಕದಲ್ಲಿ ದಾನಮ್ಮನ ಪ್ರಕರಣ ಮಾತ್ರ ಹೀಗಾಗಲಿಲ್ಲ ಎನ್ನುವುದು ಸಮಾಧಾನ ತರುವ ವಿಷಯ. ಹಾಗೆಂದು ದಾನಮ್ಮಳಂತಹ ಪ್ರಕರಣಗಳು ಕರ್ನಾಟಕದಲ್ಲಿ ಈವರೆಗೆ ನಡೆದೇ ಇಲ್ಲ ಎಂದಲ್ಲ. ದಾನಮ್ಮ ಪ್ರಕರಣದಲ್ಲಿ ದಲಿತ ಸಂಘಟನೆಗಳು ಒಂದಿಷ್ಟು ಜಾಗೃತವಾಗಿದ್ದರೆ ಅದಕ್ಕೆ ರಾಜಕೀಯ ಕಾರಣಗಳೂ ಇವೆ. ಸಂಘಪರಿವಾರದ ಕಾರ್ಯಕರ್ತರು ಈ ಅತ್ಯಾಚಾರ ಪ್ರಕರಣದಲ್ಲಿದ್ದುದು ದಲಿತ ಸಂಘಟನೆಗಳು ಒಂದಾಗುವುದಕ್ಕೆ ಕಾರಣವಾಯಿತು. ಒಂದು ವೇಳೆ ದಾನಮ್ಮಳ ಸಾವಿನಲ್ಲಿ ಮುಸ್ಲಿಮ್ ಸಮುದಾಯದ ದುಷ್ಕರ್ಮಿಗಳಿದ್ದರೆ ಬಿಜೆಪಿ ಮತ್ತು ಸಂಘಪರಿವಾರ ‘ಹಿಂದೂ ಮಹಿಳೆಯರ ಮೇಲೆ ದಾಳಿ’ ಎಂದು ಬೀದಿಗಿಳಿಯುತ್ತಿತ್ತು. ಅಂದರೆ ಸದ್ಯದ ಸಂದರ್ಭದಲ್ಲಿ ಕೆಳವರ್ಗದ ಮಹಿಳೆಯರ ಮೇಲೆ ದಾಳಿ ನಡೆದರೆ ಅದರ ವಿರುದ್ಧ ಧ್ವನಿಯೆತ್ತಲು ಒಂದು ರಾಜಕೀಯ ಕಾರಣವಿರುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ ಆ ಪ್ರಕರಣ ಹಳ್ಳ ಹಿಡಿಯುತ್ತದೆ.

  ಹರ್ಯಾಣದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಬರ್ಬರ ದಾಳಿ ಸಕಲ ಮಹಿಳೆಯರ ಮೇಲೆ ನಡೆದ ದಾಳಿಯಾಗಿದೆ. ಸಕಲ ಮನುಷ್ಯರ ಮೇಲೆ ಮೆರೆದ ಕ್ರೌರ್ಯವಾಗಿದೆ. ಇದರ ವಿರುದ್ಧ ದೇಶಾದ್ಯಂತ್ಯ ಆಕ್ರೋಶ ವ್ಯಕ್ತವಾಗಬೇಕು. ನಿರ್ಭಯಾ ಪ್ರಕರಣದಲ್ಲಿ ಉರಿದ ಮೊಂಬತ್ತಿಗಳು ಮತ್ತೆ ಬೀದಿ ಬೀದಿಗಳಲ್ಲಿ ಉರಿಯಬೇಕು. ದಿಲ್ಲಿಯ ನಾಯಕರು ಅದರ ಬಿಸಿಗೆ ಜಾಗೃತರಾಗಿ ಹರ್ಯಾಣದತ್ತ ಧಾವಿಸಬೇಕು. ಪ್ರಕರಣವನ್ನು ಪೊಲೀಸರ ಕೈಯಿಂದ ಸಿಬಿಐ ಅಥವಾ ಇನ್ನಾವುದಾದರೂ ಸ್ವತಂತ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು. ದಿಲ್ಲಿ ಮಾತ್ರವಲ್ಲ, ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರ ಮಾನವೂ ಈ ದೇಶದ ಮಾನವೇ ಆಗಿದೆ ಎನ್ನುವುದನ್ನು ಈ ಮೂಲಕ ಸರಕಾರ ಒಪ್ಪಿಕೊಳ್ಳಬೇಕು. ಹರ್ಯಾಣದಲ್ಲಿ ನಡೆದ ಅತ್ಯಾಚಾರ, ಕೊಲೆಯಿಂದ ಬೀದಿಗೆ ಬಿದ್ದಿರುವುದು ಭಾರತ ಮಾತೆಯ ಮಾನ. ಅದರ ವಿರುದ್ಧ ದೇಶದ ಪ್ರತಿ ಪ್ರಜೆಯೂ ನ್ಯಾಯಕ್ಕಾಗಿ ಬೀದಿಗಿಳಿಯಬೇಕಾದ ಸಮಯ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News