ಬಿಜೆಪಿಗೆ ಹಿಂದೂಗಳ ಮೇಲೆ ಕಾಳಜಿ ಇಲ್ಲ: ಪ್ರಮೋದ್ ಮುತಾಲಿಕ್

Update: 2018-01-19 12:55 GMT

ಬೆಂಗಳೂರು, ಜ.19: ಮೂಲಭೂತವಾದಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಕಾಶ್ಮೀರಿ ಹಿಂದೂಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1990 ಜ.19 ರಂದು ಕಾಶ್ಮೀರದಲ್ಲಿ 500 ಹಿಂದೂಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಯಿತು. ಅಲ್ಲದೆ, ದೌರ್ಜನ್ಯ, ದಬ್ಬಾಳಿಕೆಗಳನ್ನು ನಡೆಸಲಾಯಿತು. ಈ ವೇಳೆ ಕಾಶ್ಮೀರವನ್ನು ಬಿಟ್ಟು ಲಕ್ಷಾಂತರ ಹಿಂದೂಗಳು ದೇಶದ ವಿವಿಧ ಮೂಲೆಗಳಲ್ಲಿ ವಾಸಸ್ಥಾನ ಕಂಡುಕೊಂಡಿದ್ದಾರೆ. ಆದರೆ, ಈ ಘಟನೆ ನಡೆದು 19 ವರ್ಷಗಳು ಕಳೆಯುತ್ತಿದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ವೋದಿ ಅಧಿಕಾರಕ್ಕೆ ಬಂದ ನಂತರ ಹಲವು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿ ನೊಂದವರಿಗೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಗೆ ಹಿಂದೂಗಳ ಮೇಲೆ ಕಾಳಜಿಯಿಲ್ಲ. ಹಿಂದೂ ಮತಗಳ ಮೇಲೆ ಪ್ರೀತಿಯಷ್ಟೇ ಇದೆ. ಅಲ್ಲದೆ, ಇಂದಿಗೂ ಕಾಶ್ಮೀರದಲ್ಲಿನ ಹಿಂದೂಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ನುಡಿದರು.

ಕೇಂದ್ರ ಸರಕಾರ 2019 ರೊಳಗೆ ದೇಶದ ವಿವಿಧ ಭಾಗಗಳಲ್ಲಿ ವಾಸ ಮಾಡುತ್ತಿರುವ ಕಾಶ್ಮೀರದ ಹಿಂದೂಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು. 370 ವಿಧಿ ರದ್ದು ಮಾಡಬೇಕು. ಕಾಶ್ಮೀರದಲ್ಲಿ ಧ್ವಂಸ ಮಾಡಿರುವ ದೇವಸ್ಥಾನ, ಮಠ, ಮಂದಿರಗಳನ್ನು ಪುನರ್ ನಿರ್ಮಾಣ ಮಾಡಬೇಕು. ಶಿಕ್ಷಣ ಮತ್ತು ಉದ್ಯೋಗ ನೀಡಬೇಕು ಹಾಗೂ ಆರ್ಥಿಕ ನೆರವು ನೀಡಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರವನ್ನು ಪ್ರಧಾನ ವಿಷಯವನ್ನಾಗಿಸಿಕೊಂಡು ಬಿಜೆಪಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News