ಗುಜರಾತ್‌ ಮಾಜಿ ಮುಖ್ಯಮಂತ್ರಿ ಆನಂದಿಬೆನ್‌ಗೆ ಖುಲಾಯಿಸಿದ ಅದೃಷ್ಟ !

Update: 2018-01-20 04:21 GMT

ಹೊಸದಿಲ್ಲಿ, ಜ. 20: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಅದೃಷ್ಟ ಖುಲಾಯಿಸಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ ರಾಜ್ಯಪಾಲರಾಗಿ ಅವರನ್ನು ನೇಮಕ ಮಾಡಲಾಗಿದೆ.

"ಆನಂದಿಬೆನ್ ಪಟೇಲ್ ಅವರನ್ನು ಮಧ್ಯಪ್ರದೇಶ ರಾಜ್ಯಪಾಲರಾಗಿ ನೇಮಕ ಮಾಡಲು ಸಂತಸವಾಗುತ್ತಿದೆ. ಅವರು ಅಧಿಕಾರ ಸ್ವೀಕರಿಸಿದ ದಿನದಿಂದ ಅವರ ಅಧಿಕಾರಾವಧಿ ಆರಂಭವಾಗುತ್ತೆ" ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಲು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದಾಗ ಆನಂದಿಬೆನ್ ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಆದರೆ 2016ರ ಆಗಸ್ಟ್‌ನಲ್ಲಿ ವಿಜಯ್ ರೂಪಾನಿಯವರನ್ನು ಸಿಎಂ ಹುದ್ದೆಗೆ ಪಕ್ಷದ ವರಿಷ್ಠರು ನೇಮಕ ಮಾಡಿದ ಹಿನ್ನೆಲೆಯಲ್ಲಿ ಇವರ ಅಧಿಕಾರಾವಧಿ ಮೊಟಕುಗೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆ ಬಳಿಕ ರೂಪಾನಿ ಸಿಎಂ ಹುದ್ದೆ ಉಳಿಸಿಕೊಂಡಿದ್ದರು.

ಮಧ್ಯಪ್ರದೇಶದ ಹಾಲಿ ರಾಜ್ಯಪಾಲ ಓಂಪ್ರಕಾಶ್ ಕೋಹ್ಲಿಯರವು 2016ರಿಂದೀಚೆಗೆ ಗುಜರಾತ್ ಹೊಣೆ ಹೊಂದಿದ್ದಾರೆ. ಇದೀಗ ಪಟೇಲ್ ನೇಮಕದೊಂದಿಗೆ ಕೊಹ್ಲಿ ಗುಜರಾತ್‌ಗೆ ಸೀಮಿತವಾಗಲಿದ್ದಾರೆ.

ಅಧಿಕಾರಕ್ಕೆ ಬಂದ ವರ್ಷದ ಒಳಗಾಗಿ ಪಾಟೀದಾರ ಚಳವಳಿಯ ಬಿಸಿ ಸೇರಿದಂತೆ ಹಲವು ಸವಾಲುಗಳನ್ನು ಆನಂದಿಬೆನ್ ತಮ್ಮ ಆಡಳಿತಾವಧಿಯಲ್ಲಿ ಎದುರಿಸಿದ್ದರು. ಇದನ್ನು ನಿಭಾಯಿಸಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭಾರಿ ಬೆಲೆ ತೆತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News