ಬೋಧ್ ಗಯಾದಲ್ಲಿ 2 ಕಚ್ಚಾ ಬಾಂಬ್ ಗಳು ಪತ್ತೆ

Update: 2018-01-20 05:21 GMT
ಸಾಂದರ್ಭಿಕ ಚಿತ್ರ

ಪಾಟ್ನಾ, ಜ.20: ಬೌದ್ಧರ ಪವಿತ್ರ ಕ್ಷೇತ್ರವಾಗಿರುವ ಬೋದ್ ಗಯಾದಲ್ಲಿ ಎರಡು ಕಚ್ಚಾ ಬಾಂಬ್ ಗಳು ಶುಕ್ರವಾರ ರಾತ್ರಿ ಪತ್ತೆಯಾಗಿದ್ದು, ಟಿಬೆಟನ್ನರ ಧರ್ಮ ಗುರು ದಲೈ ಲಾಮಾ ಪ್ರವಚನ ಮುಗಿಸಿ ತೆರಳಿದ ಬೆನ್ನಲ್ಲೇ ಬಾಂಬ್ ಗಳು ಪತ್ತೆಯಾಗಿದೆ.

ದಲೈಲಾಮಾ  ಅವರು ಪ್ರವಚನ  ನೀಡಿದ ಕಾಲಚಕ್ರ ಮೈದಾನದಲ್ಲಿ  ಬಾಂಬ್ ಗಳು ಪತ್ತೆಯಾಗಿದ್ದು, ಪಾಟ್ನಾ ವಲಯದ ಡಿಐಜಿ ವಿನಯ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಾಂಬ್ ಗಳನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಐಜಿಪಿ ಎನ್ ಎಚ್ ಖಾನ್ ತಿಳಿಸಿದ್ದಾರೆ.

ಬಾಂಬ್ ಪತ್ತೆಯಾದ ಬಳಿಕ ದಲೈ ಲಾಮಾ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು  ಇನ್ನಷ್ಟು ಬಿಗಿಗೊಳಿಸಲಾಗಿದೆ.ದಲೈಲಾಮಾ ಪ್ರವಚನ ಮುಗಿಸಿ ತೆರಳಿದ ಬಳಿಕ ‘ಕಾಲಚಕ್ರ  ‘ ಮೈದಾನದ ಅಡುಗೆ ಕೋಣೆಯಲ್ಲಿ ಸಣ್ಣ ಸ್ಫೋಟ ಸಂಭವಿಸಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅಲ್ಲಿ  ಥರ್ಮೋಸ್ ಫ್ಲಾಸ್ಕ್  ಸ್ಫೋಟಗೊಂಡಿರುವುದು ಕಂಡು ಬಂತು. ಶೋಧ ಕಾರ್ಯ ಮುಂದುವರಿಸಿದಾಗ ಕಾಲಚಕ್ರ ಮೈದಾನದಲ್ಲಿ ಎರಡು ಕಚ್ಚಾ ಬಾಂಬ್ ಗಳು ಪತ್ತೆಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

2013ರಲ್ಲಿ ಮಹಾಬೋಧಿ ದೇಗುಲದ ಆವರಣದಲ್ಲಿ ಸಂಭವಿಸಿದ್ದ ಸರಣಿ  ಬಾಂಬ್ ಸ್ಪೋಟದಲ್ಲಿ 10 ಮಂದಿ ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ಬಾಂಬ್‌ಗಳನ್ನು ದೇಗುಲದ ಆವರಣದಲ್ಲಿ ಹುದುಗಿಸಿಟ್ಟಿರುವುದು ಪತ್ತೆಯಾಗಿತ್ತು. .ಈ ಪೈಕಿ ಮೂರನ್ನು ಅನಂತರ ನಿಷ್ಕ್ರಿಯಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News