ತೆರೆದ ಬಾವಿಯಲ್ಲಿ ಟಿಪ್ಪು ಸುಲ್ತಾನ್ ಕಾಲದ ರಾಕೆಟ್‌ಗಳು ಪತ್ತೆ

Update: 2018-01-20 13:04 GMT

ಬೆಂಗಳೂರು,ಜ.20: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಗ್ರಾಮದ ತೋಟದ ಮನೆಯೊಂದರ ತೆರೆದ ಬಾವಿಯಲ್ಲಿ ಪತ್ತೆಯಾಗಿರುವ ಬಳಕೆಯಾಗದ ಭಾರೀ ಸಂಖ್ಯೆಯ ರಾಕೆಟ್‌ಗಳು ಟಿಪ್ಪು ಸುಲ್ತಾನರ ಕಾಲಕ್ಕೆ ಸೇರಿದ್ದಾಗಿವೆ ಎಂದು ತಜ್ಞರು ದೃಢಪಡಿಸಿದ್ದಾರೆ.

ಕಳೆದ ವರ್ಷದ ಎಪ್ರಿಲ್‌ನಲ್ಲಿ ನಗರ ಗ್ರಾಮದ ರೈತ ನಾಗರಾಜ ರಾವ್ ಅವರಿಗೆ ಸೇರಿದ ಜಮೀನಿನಲ್ಲಿಯ ತೆರೆದ ಬಾವಿಯ ಹೂಳನ್ನೆತ್ತುವಾಗ ಬಳಕೆಯಾಗಿರದ ವಿವಿಧ ಗಾತ್ರಗಳ 102 ರಾಕೆಟ್‌ಗಳು ಪತ್ತೆಯಾಗಿದ್ದವು. ರಾವ್ ಅವರು ಇವುಗಳನ್ನು ಅಧ್ಯಯನಕ್ಕಾಗಿ ಪುರಾತತ್ವ,ಮ್ಯೂಝಿಯಂ ಮತ್ತು ಪರಂಪರೆ ಇಲಾಖೆಗೆ ಒಪ್ಪಿಸಿದ್ದರು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೀಜೇಶ್ವರ ಅವರು ಸುದ್ದಿಗಾರರಿಗೆ ತಿಳಿಸಿದರು.

 ಗಂಧಕ,ಕಲ್ಲಿದ್ದಲು ಮತ್ತು ಪೊಟ್ಯಾಷಿಯಂ ನೈಟ್ರೇಟ್‌ಗಳ ಮಿಶ್ರಣವಾದ ಕಪ್ಪುಪುಡಿಯಿಂದ ತುಂಬಲ್ಪಟ್ಟಿದ್ದು ಮತ್ತು ಕಬ್ಬಿಣದ ಕವಚವನ್ನು ಹೊಂದಿದ್ದು ಈ ರಾಕೆಟ್‌ಗಳ ವಿಶಿಷ್ಟ ಲಕ್ಷಣವಾಗಿದೆ ಎಂದ ಅವರು, ಇಲಾಖೆಯ ನಿವೃತ್ತ ಅಧಿಕಾರಿ ಎಚ್.ಎಂ.ಸಿದ್ದನಗೌಡರ್ ನೇತೃತ್ವದ ಇತಿಹಾಸ ತಜ್ಞರ ತಂಡವೊಂದು ಈ ವಸ್ತುಗಳ ಅಧ್ಯಯನ ನಡೆಸಿದ್ದು, ಇವು 18ನೇ ಶತಮಾನದ ಬಳಕೆಯಾಗದ ಯುದ್ಧ ರಾಕೆಟ್‌ಗಳು ಎಂಬ ತೀರ್ಮಾನಕ್ಕೆ ಬಂದಿದೆ. ನಗರವು ಆಗಿನ ಮೈಸೂರು ರಾಜ್ಯದ ಪ್ರಮುಖ ಆಡಳಿತಾತ್ಮಕ ಕೇಂದ್ರಗಳಲ್ಲಿ ಒಂದಾಗಿದ್ದರಿಂದ ಹಾಗೂ ಅಲ್ಲಿ ಟಿಪ್ಪು ಟಂಕಸಾಲೆ ಮತ್ತು ಶಸ್ತ್ರಾಗಾರವನ್ನು ಸ್ಥಾಪಿಸಿದ್ದರಿಂದ ಈ ರಾಕೆಟ್‌ಗಳು ಟಿಪ್ಪು ಸುಲ್ತಾನರ ಕಾಲಕ್ಕೆ ಸೇರಿದ್ದು ಎಂದು ತಂಡವು ನಿರ್ಧರಿಸಿದೆ ಎಂದು ವಿವರಿಸಿದ ಶೀಜೇಶ್ವರ, ನಾಲ್ಕನೇ ಆಂಗ್ಲೊ-ಮೈಸೂರು ಯುದ್ಧದ ಬಳಿಕ ನಗರದಲ್ಲಿ ಟಿಪ್ಪು ಸೇನೆಯು ಬೀಡುಬಿಟ್ಟಿದ್ದ ಸಾಧ್ಯತೆಯಿದೆ. ರಾಕೆಟ್‌ಗಳು ಈಸ್ಟ್ ಇಂಡಿಯಾ ಕಂಪನಿಯ ಕೈಸೇರುವುದನ್ನು ತಪ್ಪಿಸಲು ಬಾವಿಯಲ್ಲಿ ಎಸೆದಿರಬೇಕು ಎಂದರು.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಯುದ್ಧಗಳಲ್ಲಿ ರಾಕೆಟ್‌ಗಳನ್ನು ಬಳಸಿದ್ದರು. ಆಗ ರಾಕೆಟ್‌ಗಳಿಗೆ ಕಾಗದ ಅಥವಾ ಕಟ್ಟಿಗೆಯ ಕವಚಗಳನ್ನು ಬಳಸಲಾಗುತ್ತಿತ್ತು ಮತ್ತು ಮೈಸೂರು ಸೈನ್ಯವು ಮೊದಲ ಬಾರಿಗೆ ಅವುಗಳಿಗೆ ಕಬ್ಬಿಣದ ಕವಚಗಳನ್ನು ಬಳಸಿತ್ತು. ಸಿಡಿಮದ್ದನ್ನು ತುಂಬಲು ಕಬ್ಬಿಣದ ಕೊಳವೆಗಳ ಬಳಕೆಯು ರಾಕೆಟ್‌ಗಳಿಗೆ ಹೆಚ್ಚಿನ ಬಲವನ್ನು ಮತ್ತು ದೀರ್ಘ ವ್ಯಾಪ್ತಿಯನ್ನು ನೀಡುತ್ತಿತ್ತು. ಜೊತೆಗೆ ಮೃದುಕಬ್ಬಿಣದ ಬಳಕೆಯಿಂದಾಗಿ ಶತ್ರುಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಲು ಸಾಧ್ಯವಾಗುತ್ತಿತ್ತು ಎಂದ ಶೀಜೇಶ್ವರ, ನಾಲ್ಕನೇ ಆಂಗ್ಲೊ-ಮೈಸೂರು ಯುದ್ಧದ ಬಳಿಕ ಶ್ರೀರಂಗಪಟ್ಟಣದ ಟಿಪ್ಪುವಿನ ಶಸ್ತ್ರಾಗಾರದಲ್ಲಿದ್ದ ರಾಕೆಟ್‌ಗಳನ್ನು ಇಂಗ್ಲಂಡ್‌ನ ವೂಲ್ವಿಚ್‌ನ ರಾಯಲ್ ಶಸ್ತ್ರಕೋಠಿಗೆ ಸಾಗಿಸಲಾಗಿತ್ತು. ಮೈಸೂರಿನ ರಾಕೆಟ್‌ಗಳಿಂದ ಸ್ಫೂರ್ತಿಗೊಂಡು ಸರ್ ವಿಲಿಯಂ ಕಾಂಗ್ರೇವ್ ಅವರು ‘ಕಾಂಗ್ರೇವ್’ ರಾಕೆಟ್‌ಗಳನ್ನು ತಯಾರಿಸಿದ್ದರು ಮತ್ತು ಅವುಗಳನ್ನು ನೆಪೋಲಿಯನ್ ವಿರುದ್ಧದ ಯುದ್ಧಗಳಲ್ಲಿ ಬಳಸಲಾಗಿತ್ತು ಎಂದರು.

ನಗರ ಗ್ರಾಮದಲ್ಲಿ ಪತ್ತೆಯಾಗಿದ್ದ ರಾಕೆಟ್‌ಗಳನ್ನು ಈಗ ಇನ್ನಷ್ಟು ಅಧ್ಯಯನಕ್ಕಾಗಿ ಶಿವಮೊಗ್ಗದ ಶಿವಪ್ಪ ನಾಯಕ ಅರಮನೆಯ ಆವರಣದಲ್ಲಿರುವ ಇಲಾಖೆಯ ಮ್ಯೂಝಿಯಮ್‌ನಲ್ಲಿ ಇಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News