ಕಾಬೂಲ್ ಐಷಾರಾಮಿ ಹೋಟೆಲ್ ಮೇಲೆ ಬಂದೂಕುಧಾರಿಗಳಿಂದ ದಾಳಿ

Update: 2018-01-21 03:46 GMT

ಕಾಬೂಲ್, ಜ.21: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಶನಿವಾರ ತಡರಾತ್ರಿ ಇಂಟರ್ ಕಾಂಟಿನೆಂಟಲ್ ಹೋಟೆಲ್ ಮೇಲೆ ನಾಲ್ವರು ಬಂದೂಕುಧಾರಿಗಳು ದಾಳಿ ನಡೆಸಿ ಅತಿಥಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ದಾಳಿಕೋರರು ಹತರಾಗಿದ್ದಾರೆ. ಹೋಟೆಲ್ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರು ಮತ್ತು ಸಿಬ್ಬಂದಿ ಓಡಿಹೋಗಿದ್ದಾರೆ.

"ದಾಳಿಕೋರರು ಅಡುಗೆಮನೆ ಮೂಲಕ ಪ್ರವೇಶಿಸಿ ಹೋಟೆಲ್‌ನ ಮುಖ್ಯಭಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಬಹಳಷ್ಟು ಮಂದಿ ಗುಂಡಿನ ಸದ್ದಿನ ನಡುವೆಯೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಯಾವುದೇ ಗಾಯಗಳಿಲ್ಲದೇ ತಪ್ಪಿಸಿಕೊಂಡಿರುವ ಹೋಟೆಲ್ ವ್ಯವಸ್ಥಾಪಕ ಅಹ್ಮದ್ ಹಾರಿಸ್ ನಯಾಬ್ ಹೇಳಿದ್ದಾರೆ.

ರಾಜಧಾನಿಯ ಹೋಟೆಲ್‌ಗಳ ಮೇಲೆ ದಾಳಿ ನಡೆಯುವ ಸಂಭವ ಇದೆ ಎಂದು ಅಮೆರಿಕ ರಾಯಭಾರ ಕಚೇರಿ ಎಚ್ಚರಿಕೆ ನಿಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಅಧಿಕೃತವಾಗಿ ಸಾವು ನೋವಿನ ಪ್ರಮಾಣ ತಿಳಿದುಬಂದಿಲ್ಲ ಎಂದು ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳ ವಕ್ತಾರ ನಜೀಬ್ ಡ್ಯಾನಿಷ್ ಹೇಳಿದ್ದಾರೆ.

ಆದರೆ ಬಹಳಷ್ಟು ಮಂದಿ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮತ್ತೊಬ್ಬ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ.

ಭಾರಿ ಸ್ಫೋಟ ಮತ್ತು ಬಂದೂಕಿನ ಸದ್ದು ಒಳಗಿನಿಂದ ಕೇಳಿಬರುತ್ತಿದೆ ಎಂದು ಟೋಲೊನ್ಯೂಸ್ ಪತ್ರಕರ್ತ ಗುಬ್ಹಾರ್ ಸ್ಥಳದ ಚಿತ್ರಣ ನೀಡಿದ್ದಾರೆ. ಹಲವಾರು ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇನ್ನೂ ಗೊಂದಲದ ವಾತಾವರಣ ಮುಂದುವರಿದಿದ್ದು, ಅಗ್ನಿಶಾಮಕ ದಳದ ವಾಹನಗಳು ಮತ್ತು ಆ್ಯಂಬುಲೆನ್ಸ್‌ಗಳು ಹೋಟೆಲ್ ಆವರಣದಲ್ಲಿ ತುಂಬಿಕೊಂಡಿವೆ ಎಂದು ವಿವರಿಸಿದ್ದಾರೆ.

ಒಂದು ಹಾಗೂ ಎರಡನೇ ಮಹಡಿಯಿಂದ ಅತಿಥಿಗಳನ್ನು ರಕ್ಷಿಸಲಾಗಿದ್ದು, ನಾಲ್ಕು ಹಾಗೂ ಐದನೇ ಮಹಡಿಯ ಅತಿಥಿಗಳನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಹೋಟೆಲ್‌ನ ಮೇಲ್ಛಾವಣಿಯಲ್ಲಿ ಹೆಲಿಕಾಪ್ಟರ್ ಮೂಲಕ ಭದ್ರತಾ ಸಿಬ್ಬಂದಿಯನ್ನು ಇಳಿಸಲಾಗಿದೆ.

ಅಧಿಕೃತವಾಗಿ ಸಾವುನೋವಿನ ವಿವರಗಳನ್ನು ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ಬಿಡುಗಡೆ ಮಾಡಲು ಸಾಧ್ಯ ಎಂದು ರಹೀಮಿ ಹೇಳಿದ್ದಾರೆ. 105 ಮಂದಿ ಹೋಟೆಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ದೂರಸಂಪರ್ಕ ಖಾತೆ ಸಚವ ಶಹಜಾದ್ ಅರ್ಯೋಬಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News