ಜಮ್ಮು -ಕಾಶ್ಮೀರದಲ್ಲಿ ಓರ್ವ ಯೋಧ ಹುತಾತ್ಮ; 3 ದಿನಗಳಲ್ಲಿ ಪಾಕ್ ದಾಳಿಗೆ 11 ಬಲಿ

Update: 2018-01-21 07:07 GMT
ಯೋಧ ಚಂದನ್ ಕುಮಾರ್ ರಾಯ್

ಶ್ರೀನಗರ, ಜ.21: ಕಳೆದ ರಾತ್ರಿ ಪೂಂಚ್ ಜಿಲ್ಲೆಯ ಮೆಂದಾರ್ ಸೆಕ್ಟರ್ ನಲ್ಲಿ ಪಾಕಿಸ್ತಾನದ ಸೈನಿಕರು ನಡೆಸಿದ  ಗುಂಡಿನ ದಾಳಿಗೆ ಗಾಯಗೊಂಡಿದ್ದ ಓರ್ವ ಯೋಧ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗೆ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಪೂಂಚ್ ಜಿಲ್ಲೆಯ ಮೆಂದಾರ್ ಸೆಕ್ಟರ್ ನಲ್ಲಿ ಗುಂಡಿನ ದಾಳಿಗೆ ಗಾಯಗೊಂಡಿದ್ದ ಯೋಧ ಚಂದನ್ ಕುಮಾರ್ ರಾಯ್ ಅವರನ್ನು ಕಳೆದ ರಾತ್ರಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕಳೆದ ಗುರುವಾರದಿಂದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಗಡಿ ನಿಯಂತ್ರಣಾ ರೇಖೆಯಲ್ಲಿರುವ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಜಮ್ಮು, ಕಾತುವಾ, ಸಾಂಬಾ, ಪೂಂಚ್ ಮತ್ತು ರಾಜೋರಿಯಲ್ಲಿ 11 ಮಂದಿ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ 6 ನಾಗರಿಕರು , ಮೂವರು ಸೈನಿಕರು ಮತ್ತು ಇಬ್ಬರು  ಬಿಎಸ್ ಎಫ್ ಜವಾನರು ಸೇರಿದ್ದಾರೆ.

ಓರ್ವ ಬಿಎಸ್ ಎಫ್ ಜವಾನ ಮತ್ತು ಬಾಲಕಿಯೊಬ್ಬಳು ಗುರುವಾರ ಮೃತಪಟ್ಟರು.   ಶುಕ್ರವಾರ ಇಬ್ಬರು ನಾಗರಿಕರು  ,ಓರ್ವ ಬಿಎಸ್ ಎಫ್ ಜವಾನ ಮತ್ತು ಓರ್ವ ಸೇನಾ ಜವಾನ  ಸಾವಿಗೀಡಾಗಿ,  ಇಬ್ಬರು ಬಿಎಸ್ ಎಫ್ ಜವಾನರು ಮತ್ತು 40 ನಾಗರಿಕರು ಗಾಯಗೊಂಡಿದ್ದರು.

ಶನಿವಾರ ರಾತ್ರಿ ಪಾಕಿಸ್ತಾನ ಸೈನಿಕರ ದಾಳಿಗೆ ಮೂವರು ನಾಗರಿಕರು ಮತ್ತು ಓರ್ವ ಜವಾನ ಬಲಿಯಾಗಿ,  16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News