ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಆದಿತ್ಯನಾಥ್ ಸರಕಾರದ ಚಿಂತನೆ

Update: 2018-01-21 08:58 GMT

ಲಕ್ನೋ, ಜ.21: 2013ರ ಮುಝಫ್ಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರ  ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಹಿಂದಕ್ಕೆ ಪಡೆಯಲು ಚಿಂತನೆ ನಡೆಸಿದ್ದು, ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಅಭಿಪ್ರಾಯ ಕೇಳಿದೆ ಎನ್ನಲಾಗಿದೆ.

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ಪ್ರಕರಣವನ್ನು ಹಿಂದಕ್ಕೆ ಪಡೆಯುವುದು ಸರಿಯಾದ ಕ್ರಮವೇ ಎಂದು ಮ್ಯಾಜಿಸ್ಟ್ರೇಟರನ್ನು ಪ್ರಶ್ನಿಸಿದೆ ಎನ್ನಲಾಗಿದೆ.

ರಾಜ್ಯ ಸರಕಾರವು ಕಾನೂನು ಇಲಾಖೆಯ ಮೂಲಕ ಆಗಸ್ಟ್ 13 2013ರಲದಲಿ ದಾಖಲಾದ ಪ್ರಕರಣದ 13 ಅಂಶಗಳ ಬಗ್ಗೆ ವಿವರ ಕೇಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ‘ದ ಸಂಡೇ ಎಕ್ಸ್ ಪ್ರೆಸ್’ ವರದಿ ಮಾಡಿದೆ. ಪತ್ರದಲ್ಲಿ ಪ್ರಕರಣದ ಸೀರಿಯಲ್ ಸಂಖ್ಯೆಗಳನ್ನು ಹೊರತುಪಡಿಸಿ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸಿಲ್ಲ ಎನ್ನಲಾಗಿದೆ.

ಮುಝಫ್ಫರ್ ನಗರದಲ್ಲಿ ಬುಧಾನದ ಬಿಜೆಪಿ ಶಾಸಕ ಉಮೇಶ್ ಮಲಿಕ್ ವಿರುದ್ಧ ದಾಖಲಾಗಿರುವ 8  ಕ್ರಿಮಿನಲ್ ಪ್ರಕರಣಗಳ ಬಗ್ಗೆಯೂ ರಾಜ್ಯ ಸರಕಾರ ಅಭಿಪ್ರಾಯ ಕೇಳಿರುವುದಾಗಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಉಮೇಶ್ ಮಲಿಕ್ ಈ ಪತ್ರದ ಬಗ್ಗೆ ನನಗೆ ಮಾಹಿತಿಯಿಲ್ಲ. ನನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವಂತೆ ನಾನು ರಾಜ್ಯ ಸರಕಾರವನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಬಿಜನೂರ್ ನ ಬಿಜೆಪಿ ಸಂಸದ ಭರತೇಂದ್ರ ಸಿಂಗ್, ಮಾಜಿ ಕೇಂದ್ರ ಸಚಿವ ಹಾಗು ಸ್ಥಳೀಯ ಬಿಜೆಪಿ ಸಂಸದ ಸಂಜೀವ್ ಬಲಿಯಾನ್ ಹಾಗು ಸಾಧ್ವಿ ಪ್ರಾಚಿಯ ವಿರುದ್ಧವೂ ಪ್ರಕರಣ ದಾಖಲಾಗಿರುವುದಾಗಿ ಉಮೇಶ್ ಮಲಿಕ್ ತಿಳಿಸಿದ್ದಾರೆ.

ಜನವರಿ ಮೊದಲ ವಾರದಲ್ಲಿ ಕಾನೂನು ಇಲಾಖೆ ಜಿಲ್ಲಾ ಮ್ಯಾಜಿಸ್ಟೇಟರಿಗೆ ಈ ಪತ್ರವನ್ನು ಕಳುಹಿಸಿದೆ ಎಂಬ ಮಾಹಿತಿಯಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News