17ನೆ ವಯಸ್ಸಿನಲ್ಲಿ ಪಿಎಚ್ ಡಿ, 11ನೆ ವಯಸ್ಸಿಗೆ 12ನೆ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ!

Update: 2018-01-22 09:07 GMT

ಹೊಸದಿಲ್ಲಿ, ಜ.21: ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿರುವ ಶಿಕ್ಷಣ ವ್ಯವಸ್ಥೆ ಹಲವು ವಿಷಯಗಳಲ್ಲಿ ಸುಧಾರಣೆ ಕಾಣಬೇಕು. ಪ್ರಾಯೋಗಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎನ್ನುವುದು ಹಲವರ ಅಭಿಪ್ರಾಯ. ಆದರೂ ಈ ನಡುವೆ ಕೆಲವರು ದೇಶದಲ್ಲಿಯೇ ಸಾಮಾನ್ಯ ಶಿಕ್ಷಣದ ಮೊರೆಹೋಗದೆ ವಿಭಿನ್ನ ಶೈಲಿಯ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅಂತಹದ್ದೇ ಶಿಕ್ಷಣ ಪಡೆದ ಸಹೋದರ-ಸಹೋದರಿಯ ಕಥೆಯಿದು.

11ರ ಹರೆಯದ ಅಗಸ್ತ್ಯಾ ಜೈಸ್ವಾಲ್ ಹೈದರಬಾದ್ ನ ನಿವಾಸಿ. 10ನೆ ತರಗತಿಯವರೆಗೆ ಈತ ಶಾಲೆಯ ಮೆಟ್ಟಿಲನ್ನೇ ಹತ್ತಿರಲಿಲ್ಲ. ಮನೆಯಲ್ಲೇ ಕುಳಿತು 10ನೆ ತರಗತಿಯಲ್ಲಿ ಈತ ತೇರ್ಗಡೆಯಾಗಿದ್ದ. ಇದೀಗ ಈತ 12ನೆ ತರಗತಿ ಪರೀಕ್ಷೆಯಲ್ಲಿ 63 ಶೇ. ಅಂಕ ಗಳಿಸಿ ಉತ್ತೀರ್ಣನಾಗಿದ್ದಾನೆ. ಇನ್ನು ಅಗಸ್ತ್ಯಾನ ಸಹೋದರಿ ನೈನಾಳದ್ದು ಇನ್ನೂ ವಿಭಿನ್ನ ಸಾಧನೆ. ಟೇಬಲ್ ಟೆನ್ನಿಸ್ ನಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ಈಕೆ ತನ್ನ 15ನೆ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದ್ದು, ಇದೀಗ 17ನೆ ವಯಸ್ಸಿನಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದಾಳೆ.

ಇವರಿಬ್ಬರ ತಂದೆ ಅಶ್ವನಿ ಕುಮಾರ್ ವಕೀಲರಾಗಿದ್ದು, ಮಕ್ಕಳ ಸಾಧನೆಗೆ ಅವರ ತಾಯಿಯ ಪರಿಶ್ರಮವೇ ಪ್ರಮುಖ ಕಾರಣ ಎಂದು ಹೇಳುತ್ತಾರೆ.

“ಅವರು ಸಾಮಾನ್ಯ ಮಕ್ಕಳಂತೆಯೇ ಇದ್ದರು. 15 ಮಂದಿಯ ಅವಿಭಕ್ತ ಕುಟುಂಬದಲ್ಲೇ ನನ್ನ ಇಬ್ಬರು ಮಕ್ಕಳು ಬೆಳೆದರು. ತಾಯಿಯೇ ಮೊದಲ ಗುರು ಎಂಬ ವಿಚಾರವನ್ನು ನಾನು ನಂಬಿದ್ದೆ, 2000ದಲ್ಲಿ ನೈನಾ ಜನಿಸಿದಾಗ ಆಕೆಯನ್ನು ಪ್ರತಿಭಾವಂತೆ ಮಾಡಬೇಕೆಂದು ನಾನು ಪತ್ನಿಯೊಂದಿಗೆ ಹೇಳಿದ್ದೆ. ನೈನಾ ಮಗುವಾಗಿದ್ದಾಗಲೇ ಆಕೆಗೆ ಪ್ರಕೃತಿ, ಪ್ರಾಣಿಗಳು, ಮರಗಳು, ಹೂವುಗಳು, ಹಣ್ಣುಗಳು, ವ್ಯಕ್ತಿಗಳು ಹಾಗು ಸಂಬಂಧಗಳ ಬಗ್ಗೆ ಕಲಿಸುತ್ತಾ ಬಂದೆವು. ಆಕೆಗೆ 5 ವರ್ಷವಾದಾಗ ಶಾಲೆಗೆ ಕಳುಹಿಸದಿರಲು ನಾವು ನಿರ್ಧರಿಸಿದೆವು. ಹಿಂದಿ, ಇಂಗ್ಲಿಷ್, ಗಣಿತ ಹಾಗು ವಿಜ್ಞಾನ ವಿಷಯಗಳ ಬಗ್ಗೆ ಕಲಿಸಿದೆವು. ಹಿಂದಿ, ತೆಲುಗು ಹಾಗು ಇಂಗ್ಲಿಷ್ ದಿನಪತ್ರಿಕೆಗಳನ್ನು ಓದುವಂತೆಯೂ ಹುರಿದುಂಬಿಸಿದೆವು.ಇದೇ ಸಮಯದಲ್ಲಿ ನಾನು ಆಕೆಗೆ ಟೇಬಲ್ ಟೆನ್ನಿಸ್ ನಲ್ಲಿ ತರಬೇತಿ ನೀಡಲು ಪ್ರಾರಂಭಿಸಿದೆ” ಎಂದು ಕುಮಾರ್ ಹೇಳುತ್ತಾರೆ.

2007ರಲ್ಲಿ ನೈನಾಗೆ 7 ವರ್ಷವಾಗಿದ್ದಾಗ ಕುಮಾರ್ ಆಕೆಗೆ 10ನೆ ತರಗತಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅಲ್ಲಿ ಅವಕಾಶ ಸಿಗದೇ ಇದ್ದಾಗ ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಗೆ ಸಂಬಂಧಿಸಿದ ಲಂಡನ್ ಮೂಲದ ಸಂಸ್ಥೆಯನ್ನು ಸಂಪರ್ಕಿಸಿದರು.  ಈ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂಟರ್ ನ್ಯಾಶನಲ್ ಜನರಲ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಶನ್ (ಐಜಿಸಿಎಸ್ ಇ) ಪರೀಕ್ಷೆ ಬರೆಯಲು ಅವಕಾಶ ನೀಡುತ್ತದೆ. ಈ ಸಂಸ್ಥೆಯ ಸಿಇಒ ಭಾರತಕ್ಕೆ ಆಗಮಿಸಿದ್ದಾಗ ಅವರನ್ನು ಕುಮಾರ್ ಭೇಟಿಯಾಗಿ ನೈನಾಳ ಬಗ್ಗೆ ವಿವರಿಸಿದ್ದರು. ನೈನಾ ಸಾಧನೆಯ ಬಗ್ಗೆ ಕೇಳಿ ಆಶ್ಚರ್ಯಗೊಂಡ ಐಜಿಸಿಎಸ್ ಇ ಸಿಇಒ ನೈನಾಳಿಗೆ ಚೆನ್ನೈಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದರು. 2008ರಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದ ನೈನಾ ವಿಶ್ವದ 170 ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಅರ್ಹತೆ ಪಡೆದಳು.

“ಐಜಿಸಿಎಸ್ ಇ ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ ಮಧ್ಯಂತರ ಮಂಡಳಿಯು ನೈನಾಗೆ 10 ನೆ ವಯಸ್ಸಿನಲ್ಲಿ 12ನೆ ತರಗತಿಯ ಪರೀಕ್ಷೆ ಬರೆಯಲು ಅವಕಾಶ ನೀಡಿತು. ಆಕೆ ಉಸ್ಮಾನಿಯಾ ವಿವಿಯಲ್ಲಿ ಮಾಸ್ ಕಮ್ಯುನಿಕೇಶನ್ ನಲ್ಲಿ ಪದವಿ ಹಾಗು ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಳು” ಎಂದು ಕುಮಾರ್ ಹೇಳುತ್ತಾರೆ.

ನೈನಾ ಹುಟ್ಟಿದ 7 ವರ್ಷಗಳ ನಂತರ ಅಗಸ್ತ್ಯಾ ಜನಿಸಿದ್ದು, ಅವನಿಗೂ ಇದೇ ರೀತಿಯ ಶಿಕ್ಷಣ ನೀಡಲಾಯಿತು. “ಆತ ತನ್ನ 2ನೆ ವರ್ಷದಿಂದಲೇ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಆರಂಭಿಸಿದ್ದ. ಅಗಸ್ತ್ಯಾ ಐಜಿಸಿಎಸ್ ಇ ಪರೀಕ್ಷೆ ಬರೆಯದಿದ್ದರೂ 8ನೆ ವಯಸ್ಸಿನಲ್ಲಿ 10ನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದ. ಶಿಕ್ಷಣ ಇಲಾಖೆಯಿಂದ ಇದಕ್ಕಾಗಿ ಅನುಮತಿ ಪಡೆಯಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ಅದೃಷ್ಟವಶಾತ್ ಐಎಎಸ್ ಅಧಿಕಾರಿ ಲವ್ ಅಗರ್ವಾಲ್ ರ ಸಹಾಯದಿಂದ ಅತ ಪರೀಕ್ಷೆ ಬರೆಯುವಂತಾಯಿತು. ಇದೀಗ ಅಗಸ್ತ್ಯಾ 12ನೆ ತರಗತಿಯಲ್ಲೂ ಉತ್ತೀರ್ಣನಾಗಿದ್ದಾನೆ” ಎಂದು ಕುಮಾರ್ ಹೇಳುತ್ತಾರೆ.

“ಮೊದಲನೆಯದಾಗಿ ನಮ್ಮ ಮನೆಯಲ್ಲಿ ಟಿವಿ ಇಲ್ಲ. ಕೋಣೆಯ ಮುಂಭಾಗ ಡೆಸ್ಕ್ ಟಾಪ್ ಕಂಪ್ಯೂಟರ್ ಇದ್ದು, ನಾನು ವಾರ್ತೆಗಳನ್ನು ನೋಡುತ್ತೇನೆ. ನನ್ನ ಮಕ್ಕಳು ಕ್ರೀಡೆಗಳಲ್ಲಿ ಚುರುಕಾಗಿದ್ದಾರೆ. ನೈನಾ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿಯಾಗಿದ್ದು, ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ” ಎಂದು ತಮ್ಮ ಮಕ್ಕಳ ಯಶೋಗಾಥೆಯನ್ನು ಕುಮಾರ್ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News