"ಗುಂಡು ನಿರೋಧಕ ಬಂಕರ್ ಬೇಡ; ತುಂಡು ಭೂಮಿ ಕೊಡಿ ಸಾಕು"

Update: 2018-01-23 03:57 GMT

ಶ್ರೀನಗರ, ಜ. 23: ನಮಗೆ ಬೇಕಿರುವುದು ಗುಂಡು ನಿರೋಧಕ ಬಂಕರ್‌ಗಳಲ್ಲ; ಬದಲಾಗಿ ನಮ್ಮ ಜೀವನಾಧಾರಕ್ಕೆ ತುಂಡು ಭೂಮಿ. ಗಡಿಭಾಗದಲ್ಲಿ ಪಾಕಿಸ್ತಾನದ ಗುಂಡಿನ ಮೊರೆತದಿಂದ ಕಂಗೆಟ್ಟಿರುವ ನಾಗರಿಕರ ಒಕ್ಕೊರಲ ಧ್ವನಿ ಇದು.

ಜಮ್ಮು ಮತ್ತು ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೇನೆಯ ಗುಂಡಿನ ದಾಳಿಯಿಂದ ನಿರಂತರವಾಗಿ ತೊಂದರೆಗೀಡಾಗುತ್ತಿರುವ ನಾಗರಿಕರಿಗೆ ಬಾಂಬ್ ಶೆಲ್ಟರ್‌ಗಳನ್ನು ಮತ್ತು ಬಂಕರ್‌ಗಳನ್ನು ಒದಗಿಸಿಕೊಡುವ ಭರವಸೆಯನ್ನು ರಾಜಕಾರಣಿಗಳು ನೀಡುತ್ತಲೇ ಬಂದಿದ್ದರೆ. ಆದರೆ ಇದು ತೀರಾ ಅವಾಸ್ತವಿಕ ಎನ್ನುವುದು ಜನರ ಅಭಿಮತ.

ಕಳೆದ ಬುಧವಾರದಿಂದೀಚೆಗೆ ನಾಗರಿಕ ಪ್ರದೇಶಗಳ ಮೇಲೆ ಪಾಕಿಸ್ತಾನಿ ಸೇನೆ ನಡೆಸುತ್ತಿರುವ ದಾಳಿಯಲ್ಲಿ 12 ಮಂದಿ ಜೀವ ಕಳೆದುಕೊಂಡಿದ್ದು, 60 ಸಾವಿರಕ್ಕೂ ಹೆಚ್ಚು ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇವರನ್ನು ಭೇಟಿ ಮಾಡಿದಾಗ ಬಹುತೇಕ ಜನರಿಂದ ಬಂದ ಉತ್ತರ, "ಬಂಕರ್‌ಗಳ ನಿರ್ಮಾಣದಿಂದ ನಮ್ಮ ಜೀವನವೇನೂ ಬದಲಾಗದು. ಜೀವನಾಧಾರಕ್ಕೆ ಶಾಶ್ವತ ವ್ಯವಸ್ಥೆ ಮಾಡಬೇಕು" ಎನ್ನುವುದು.

ಒಂದು-ಎರಡು ಕೋಣೆಗಳ ಪುಟ್ಟ ಮನೆಯಲ್ಲಿ ಬಂಕರ್ ನಿರ್ಮಾಣ ಹೇಗೇ ಸಾಧ್ಯ? ಅಸಂಖ್ಯಾತ ಕುಟುಂಬಗಳು ಇಂಥ ಮನೆಗಳಲ್ಲಿ ವಾಸವಿದ್ದು, ಇಂಥ ಪರಿಸ್ಥಿತಿಯಲ್ಲಿ ಬಂಕರ್ ಯೋಜನೆ ಅವಾಸ್ತವಿಕ ಎಂದು 32 ವರ್ಷದ ಛಾಯಾಗ್ರಾಹಕ ವಿಕ್ರಮ್ ಕುಮಾರ್ ಹೇಳುತ್ತಾರೆ. ಗಡಿಯಾಚೆಗೆ 5-10 ಕಿಲೋಮೀಟರ್ ದೂರದಲ್ಲಿ ಸುರಕ್ಷಿತ ಪ್ರದೇಶದಲ್ಲಿ ಭೂಮಿ ನೀಡುವುದು ಮಾತ್ರ ಈ ಸಮಸ್ಯೆಗೆ ಪರಹಾರ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕೋಟಿಗಟ್ಟಲೆ ವೆಚ್ಚ ಮಾಡಿ ಬಂಕರ್ ನಿರ್ಮಿಸಲು ಸಿದ್ಧವಿದ್ದರೆ ಜನರ ಜೀವನಾಧಾರಕ್ಕಾಗಿ ಸುರಕ್ಷಿತ ಪ್ರದೇಶದಲ್ಲಿ ತುಂಡುಭೂಮಿ ಏಕೆ ನೀಡಬಾರದು ಎನ್ನುವುದು ಅವರ ಪ್ರಶ್ನೆ.

ನಿವೃತ್ತ ಸೈನಿಕ ರಾಜ್‌ಕುಮಾರ್, ರೈತ ಸಾಯಿ ಖುರ್ದ್ ಎಲ್ಲರ ಅಭಿಪ್ರಾಯವೂ ಇದೇ. ಕಳೆದ ಚುನಾವಣೆ ವೇಳೆ ಬಿಜೆಪಿ, ಗಡಿಭಾಗದ ಎಲ್ಲ ಕುಟುಂಬಗಳಿಗೆ ಸುರಕ್ಷಿತ ಪ್ರದೇಶದಲ್ಲಿ 1361 ಚದರ ಅಡಿ (ಐದು ಮಾರ್ಲ) ಜಾಲವನ್ನು ನೀಡುವ ಭರವಸೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News