ಗುಜರಾತ್ ವಿಪಕ್ಷ ನಾಯಕನಾಗಿ ಪರೇಶ್ ಧನಾನಿ ಅಧಿಕಾರ ಸ್ವೀಕಾರ

Update: 2018-01-23 05:49 GMT

ಅಹ್ಮದಾಬಾದ್, ಜ.23: ಗುಜರಾತ್ ವಿಧಾನಸಭೆಯ ವಿಪಕ್ಷ ನಾಯಕನಾಗಿ ಅಮ್ರೇಲಿಯ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯದಿಂದ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ಯಾರಿಂದಲೂ ಹಾರ-ತುರಾಯಿಯನ್ನ್ನು ಸ್ವೀಕರಿಸುವುದಿಲ್ಲ ಎಂದು ಪರೇಶ್ ಶಪಥ ಮಾಡಿದ್ದಾರೆ.

  ಪರೇಶ್ ಕ್ಷೇತ್ರವಾದ ಅಮ್ರೇಲಿ ಹಾಗೂ ಸೌರಾಷ್ಟ್ರದಿಂದ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ತಮ್ಮ ನೆಚ್ಚಿನ ನಾಯಕನನ್ನು ಅಭಿನಂದಿಸಿದರು. ಗೋಧಿ, ಜೋಳ ಹಾಗೂ ಕಡಲೆ ಬೇಳೆಗಳ ಸಸ್ಯಗಳಿಂದ ಮಾಡಿರುವ ಹೂ ಗುಚ್ಛವನ್ನು ಪರೇಶ್‌ಗೆ ನೀಡಿದರು.

ವಿಭಿನ್ನ ಹೂಗುಚ್ಛದ ಬಗ್ಗೆ ಪ್ರತಿಕ್ರಿಯಿಸಿದ ಪರೇಶ್,‘‘ಇದು ಬಿಜೆಪಿ ಸರಕಾರದ ರೈತ ವಿರೋಧಿ ಧೋರಣೆಯನ್ನು ಪ್ರತಿನಿಧಿಸುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡದೇ ರೈತರನ್ನು ಸತಾಯಿಸುತ್ತ್ಟಿರುವ ರಾಜ್ಯ ಸರಕಾರದ ವಿರುದ್ದ ನಾನು ಹೋರಾಟ ನಡೆಸುವೆ’’ ಎಂದರು.

ಬಿಜೆಪಿಯ ಭಯ, ವಂಚನೆ ಹಾಗೂ ಭ್ರಷ್ಟಾಚಾರದ ಆಡಳಿತವನ್ನು ಅಂತ್ಯಗೊಳಿಸುವುದು ಕಾಂಗ್ರೆಸ್‌ನ ಮುಖ್ಯ ಉದ್ದೇಶ. ಸ್ವಾತಂತ್ರ ಚಳುವಳಿಯಲ್ಲಿ ಬ್ರಿಟಷರನ್ನು ಭಾರತದಿಂದ ಕಿತ್ತೊಗೆದ ರೀತಿಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಬಿಜೆಪಿಯನ್ನು ಗುಜರಾತ್ ಅಧಿಕಾರದಿಂದ ಕಿತ್ತೊಗೆಯಲಿದೆ’’ ಎಂದು 41ರ ಹರೆಯದ ಶಾಸಕ ಪರೇಶ್ ಹೇಳಿದ್ದಾರೆ.

 ‘‘ನಿರುದ್ಯೋಗ, ಶಿಕ್ಷಣ, ಆರೋಗ್ಯ ಸೌಲಭ್ಯಗಳು, ಹತ್ತಿ ಹಾಗೂ ಬೇಳೆ ಕಾಳುಗಳ ಬೆಂಬಲ ಬೆಲೆ ಹೆಚ್ಚಳ, ನೀರಾವರಿ ನೀರು ಹಾಗೂ ಕೃಷಿಗೆ ಸಾಕಷ್ಟು ವಿದ್ಯುತ್ ಸರಬರಾಜಿಗೆ ಸಂಬಂಧಿಸಿ ವಿಧಾನಸಭೆಯಲ್ಲಿ ಹೋರಾಟ ನಡೆಸುತ್ತೇನೆ’’ಎಂದು ಪರೇಶ್ ಹೇಳಿದ್ದಾರೆ. ಹಿರಿಯ ಮುಖಂಡರಾದ ರಾಜ್ಯ ಕಾಂಗ್ರಸ್ ಅಧ್ಯಕ್ಷ ಭರತ್‌ಸಿನ್ಹಾ ಸೋಳಂಕಿ, ಎಐಸಿಸಿ ವಕ್ತಾರ ಶಕ್ತಿ ಸಿನ್ಹಾ ಗೊಹಿಲ್ ಹಾಗೂ ರಾಜ್ಯ ಸಭಾ ಸದಸ್ಯ ಮಧುಸೂದನ್ ಮಿಸ್ತ್ರಿ ಸಮ್ಮುಖದಲ್ಲಿ ವಿಪಕ್ಷ ನಾಯಕನಾಗಿ ಪರೇಶ್ ಅಧಿಕಾರ ಸ್ವೀಕರಿಸಿದರು. ದಲಿತ ಹೋರಾಟಗಾರ, ಶಾಸಕ ಜಿಗ್ನೇಶ್ ಮೆವಾನಿ, ಭಾರತೀಯ ಬುಡಕಟ್ಟು ಪಕ್ಷದ ಶಾಸಕರಾದ ಚೋಟುಬಾಯಿ ವಸಾವ ಹಾಗೂ ಅವರ ಪುತ್ರ ಮಹೇಶ್ ವಸಾವ ಗೈರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News