ಹಿಂದಿಯನ್ನು ಅಧಿಕೃತವಾಗಿ ಕಲಿಸುವುದು ಬೇಡ: ಡಾ.ಸಿ.ಎನ್.ರಾಮಚಂದ್ರನ್

Update: 2018-01-23 12:29 GMT

ಬೆಂಗಳೂರು, ಜ.22: ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಅಧಿಕೃತವಾಗಿ ಕಲಿಸುವುದು ಬೇಡ. ಸ್ವ ಆಸಕ್ತಿಯಿಂದ ಕಲಿಯವವರು ಹಿಂದಿ, ಸಂಸ್ಕೃತ ಸೇರಿದಂತೆ ಎಷ್ಟು ಭಾಷೆ ಬೇಕಾದರು ಕಲಿತುಕೊಳ್ಳಲಿ ಎಂದು ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದರು.

ಮಂಗಳವಾರ ಹೊಂಬಾಳೆ ಪ್ರತಿಭಾರಂಗ ನಗರದ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಹಿರಿಯ ಚಿತ್ರಕಲಾವಿದ ಎಂ.ಎಸ್.ಮೂರ್ತಿ ರಚಿಸಿರುವ 25 ನವೋದಯ ಸಾಹಿತಿಗಳ ರೇಖಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಏಕ ಭಾಷೆ, ಏಕ ಸಂಸ್ಕೃತಿಯ ಆರ್ಭಟ ಹೆಚ್ಚಾಗುತ್ತಿದ್ದು, ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ ಎಂದು ತಿಳಿಸಿದರು.

ಹಿಂದಿ ಭಾಷೆ ಯಾವ ಕಾಲದಲ್ಲೂ ರಾಷ್ಟ್ರೀಯ ಭಾಷೆಯಾಗಿರಲಿಲ್ಲ. ಅದರ ವ್ಯಾಪ್ತಿ ಕೇವಲ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಭಾಷೆಯಾಗಿಸುವ ನಿಟ್ಟಿನಲ್ಲಿ ಷಡ್ಯಂತ್ರಗಳು ಹಾಗೂ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಹಿಂದಿ ಕುರಿತು ವಿರೋಧ ವ್ಯಕ್ತಪಡಿಸುವವರನ್ನು ದೇಶದ್ರೋಹಿಗಳು ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆ. ಇಂತಹ ಏಕ ಸಂಸ್ಕೃತಿ, ಏಕ ಭಾಷೆಯ ಪ್ರತಿಪಾದಕರ ವಿರುದ್ಧ ನಾವು ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

1935ರಲ್ಲಿಯೇ ರಾಷ್ಟ್ರಕವಿ ಕುವೆಂಪು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದ್ದರು. ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಹಾಗೂ ವಿಶ್ವಮಟ್ಟದಲ್ಲಿ ವ್ಯವಹರಿಸಲು ಇಂಗ್ಲಿಷ್ ಇರಲಿ. ಆದರೆ, ಯಾವುದೇ ಕಾರಣಕ್ಕೂ ಹಿಂದಿಯನ್ನು ಅಧಿಕೃತವಾಗಿ ಕಲಿಸುವುದಕ್ಕೆ ಅವಕಾಶ ಇರಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಕೆಲವು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಿಂದಿಯನ್ನು ಒತ್ತಾಯವಾಗಿ ಹೇರಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನವೋದಯ ಸಾಹಿತಿಗಳು ಮಾದರಿಯಾಗಲಿ: ಸ್ವಾತಂತ್ರ ಪೂರ್ವದಿಂದಲೂ ಅಖಂಡ ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ನವೋದಯ ಸಾಹಿತಿಗಳು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಇವರು ತಮ್ಮ ಸಾಹಿತ್ಯ ಬರವಣೆಗೆಯನ್ನು ಹಣಕ್ಕಾಗಿ, ಪ್ರಸಿದ್ಧಿಗಾಗಿ ಬರೆದವರಲ್ಲ. ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳ ಎದುರಾಗಿ ಕನ್ನಡ ಭಾಷೆಯ ಅಸ್ಮಿತೆಯನ್ನು ಸಂರಕ್ಷಿಸುವುದಕ್ಕಾಗಿ ಕನ್ನಡದಲ್ಲಿ ವಿಫುಲವಾಗಿ ಸಾಹಿತ್ಯವನ್ನು ರಚನೆ ಮಾಡಿದರು ಎಂದು ಅವರು ಸ್ಮರಿಸಿದರು.

ಸೈನ್ಯದಲ್ಲಿ, ಪಾರ್ಲಿಮೆಂಟ್‌ನಲ್ಲಿ ಹಾಗೂ ಕೇಂದ್ರ ಸರಕಾರದ ಆಡಳಿತದಲ್ಲಿ ಹಿಂದಿಯನ್ನೇ ಮೊದಲ ಆದ್ಯತೆಯಾಗಿಸುವ ಮೂಲಕ ಹಿಂದಿಯೇತರಿಗೆ ಮುಜುಗರ, ಕೀಳರಿಮೆಗೆ ಒಳಗಾಗುವಂತೆ ಮಾಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದ ಸಂವಹನಕ್ಕೆ ಹಿಂದಿ ಬದಲಿಗೆ ಇಂಗ್ಲಿಷ್ ಇರಲಿ. ಆದರೆ, ರಾಷ್ಟ್ರಮಟ್ಟದಲ್ಲೂ ಹಿಂದಿಯೇ ಜಾರಿಯಾದರೆ ಪ್ರಾದೇಶಿಕ ಭಾಷೆಗಳಿಗೆ ಅಪಾಯ ತಪ್ಪಿದ್ದಲ್ಲವೆಂದು ಅವರು ಎಚ್ಚರಿಕೆ ನೀಡಿದರು.

ಹಿರಿಯ ಚಿತ್ರಕಲಾವಿದ ಎಂ.ಎಸ್.ಮೂರ್ತಿ ಮಾತನಾಡಿ, ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಹಿರಿಯ ಕವಿ ಶಿವರಾಮಕಾರಂತರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಮಾತುಗಳಿಂದ ಚಿಂತನೆಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ. ಹಾಗೆಯೇ ಲಂಕೇಶ್‌ರವರ ಬದುಕು ಬರಹಗಳು ನನ್ನನ್ನು ತಿದ್ದಿ ತೀಡಿವೆ. ಅಂತವರ ಒಡನಾಟದ ನೆನಪುಗಳೆ ನನ್ನನ್ನು ಸಕಾರಾತ್ಮಕ ಕ್ರಿಯೆಯಲ್ಲಿ ತೊಡಗುವಂತೆ ಸದಾ ಪ್ರೇರೇಪಿಸುತ್ತಿರುತ್ತವೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಸುಬ್ಬಣ್ಣ, ಹಿರಿಯ ಕವಿ ಬಿ.ಆರ್.ಲಕ್ಷ್ಮಣ್‌ರಾವ್, ಡಾ.ಬೈರಮಂಗಲ ರಾಮೇಗೌಡ, ಆನಂದ ಮಾದಲಗೆರೆ, ಹೊಂಬಾಳೆ ಪ್ರತಿಭಾರಂಗದ ಎಚ್.ಫಲ್ಗುಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನವೋದಯ ಸಾಹಿತಿಗಳಾದ ದ.ರಾ.ಬೇಂದ್ರೆ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬೆಟಗೇರಿ ಕೃಷ್ಣಶರ್ಮ, ವಿ.ಸೀತಾರಾಮಯ್ಯ, ಮಧುರಚೆನ್ನ, ಕಡೆಂಗೋಡ್ಲು ಶಂಕರಭಟ್ಟ, ಪು.ತಿ.ನರಸಿಂಹಾಚಾರ್, ಡಾ.ಸಿದ್ದಯ್ಯ ಪುರಾಣಿಕ, ಜಿ.ಎಸ್.ಶಿವರುದ್ರಪ್ಪ, ಡಾ.ಶಿವರಾಮಕಾರಂತ ಸೇರಿದಂತೆ 25 ಸಾಹಿತಿಗಳ ರೇಖಾ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಜ.26ರವರೆಗೆ ಕನ್ನಡ ಭವನದ ವರ್ಣ ಆರ್ ಗ್ಯಾಲರಿಯಲ್ಲಿ ಪ್ರದರ್ಶನ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News