ಕುಖ್ಯಾತ ಸರಗಳ್ಳರ ಬಂಧನ: 18 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

Update: 2018-01-23 13:01 GMT

ಬೆಂಗಳೂರು, ಜ. 23: ಬೆಂಗಳೂರು ನಗರ ದಕ್ಷಿಣ ವಿಭಾಗದ ಗಿರಿನಗರ ಪೊಲೀಸರು ಮೂವರು ಕುಖ್ಯಾತ ಸರಗಳ್ಳರನ್ನು ಬಂಧಿಸಿ ಅವರಿಂದ ಸುಮಾರು 18 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಧಿತರು ಬೊಮ್ಮನಹಳ್ಳಿಯ ನಿವಾಸಿ ಇಬ್ರಾನ್ ಪಾಷ(31), ಅಬ್ದುಲ್ ಷರೀಫ್(34), ಅಬ್ದುಲ್ ಷಕಾವತ್(22) ಎಂದು ಹೇಳಿದರು. ಆರೋಪಿಯಾದ ಇಮ್ರಾನ್ ಪಾಷ ಈ ಹಿಂದೆ ಕಾರು ಚಾಲಕನಾಗಿದ್ದು, ಸರಿಯಾದ ಕೆಲಸವಿರಲಿಲ್ಲ. ಸುಮಾರು ಒಂದೂವರೆ ಲಕ್ಷ ರೂ.ಸಾಲ ಮಾಡಿದ್ದ. ಕೆಲಸವಿಲ್ಲದೆ ಮನೆಯಲ್ಲೇ ಟಿವಿ ನೋಡುತ್ತಿದ್ದಾಗ ಆರೋಪಿ ಕ್ರೈಂ ನ್ಯೂಸ್‌ನಲ್ಲಿ ಪ್ರಸಾರವಾಗುವ ಸರ ಅಪರಹಣ ಸುದ್ದಿಗಳನ್ನು ನೋಡಿ ಅದರಂತೆ ಸರಗಳ್ಳನಾಗಿ ರೂಪುಗೊಂಡು ತನ್ನ ಸ್ನೇಹಿತನಾದ ಬಂಧಿತ ಆರೋಪಿ ಅಬ್ದುಲ್ ಷರೀಪ್‌ಗೆ ವಿಡಿಯೋಗಳನ್ನು ತೋರಿಸಿ, ಇಬ್ಬರೂ ಸೇರಿ ಸರಗಳ್ಳತನ ಆರಂಭಿಸಿದ್ದರು ಎಂದು ತಿಳಿಸಿದರು.

ಸರ ಅಪರಹಣಕ್ಕೆ ಹಳೆಯ ಪಲ್ಸರ್ ಬೈಕ್‌ಗಳನ್ನು ಖರೀದಿಸಿ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಂಡು ಈ ಕೃತ್ಯ ಮಾಡುತ್ತಿದ್ದರು. ಆರೋಪಿಗಳು ಸರ ಅಪಹರಣದಿಂದ ಬಂದ ಹಣದಲ್ಲಿ ಆರೋಪಿ ಇಮ್ರಾನ್ ಪಾಷ ರಾಮನಗರದಲ್ಲಿ ಸೈಟು ಖರೀದಿಸಿ ಮುಂಗಡ ಹಣ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಒಟ್ಟು 19 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 2016ರಲ್ಲಿ ನಡೆದ ಮೂರು ಪ್ರಕರಣಗಳು, 2017ರಲ್ಲಿ ನಡೆದ 15 ಪ್ರಕರಣ ಹಾಗೂ 2018ರಲ್ಲಿ ನಡೆದ ಒಂದು ಪ್ರಕರಣ ಸೇರಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News