ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿ ಆತ್ಮಹತ್ಯೆ

Update: 2018-01-23 14:14 GMT

ಭುವನೇಶ್ವರ,ಜ.23: ಕಳೆದ ವರ್ಷ ಸಿಆರ್‌ಪಿಎಫ್ ಯೋಧರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳೆನ್ನಲಾದ ಕೋರಾಪತ್‌ನ ಅಪ್ರಾಪ್ತ ವಯಸ್ಕ ಬುಡಕಟ್ಟು ಬಾಲಕಿಯ ಕುಟುಂಬ ಸದಸ್ಯರು ಮಂಗಳವಾರ ಆಕೆಯ ಶವದೊಂದಿಗೆ ಪ್ರತಿಭಟನೆ ನಡೆಸಿದರಲ್ಲದೆ, ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲು ನಿರಾಕರಿಸಿದರು. ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

ಶೀತಲೀಕರಣ ವ್ಯವಸ್ಥೆಯಲ್ಲದೆ ಕೊಳೆಯಲು ಆರಂಭಿಸಿದ್ದ ಬಾಲಕಿಯ ಶವವನ್ನು ಕುಂಡುಲಿಯ ಸಮುದಾಯ ಆರೋಗ್ಯ ಕೇಂದ್ರದಿಂದ ಪಡೆದುಕೊಂಡ ಕುಟುಂಬದವರೊಂದಿಗೆ ಸೇರಿಕೊಂಡ ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ 26ರಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ನ್ಯಾಯಕ್ಕಾಗಿ ಆಗ್ರಹಿಸಿದರು. ಇದೇ ವೇಳೆ ಈ ವಿಷಯದಲ್ಲಿ ರಾಜ್ಯ ಸರಕಾರದ ನಿರ್ಲಿಪ್ತತೆಯನ್ನು ಪ್ರತಿಪಕ್ಷಗಳು ಖಂಡಿಸಿವೆ.

ತನ್ನ ಮೇಲೆ ಅತ್ಯಾಚಾರ ನಡೆದಿರಲಿಲ್ಲವೆಂದು ಹೇಳುವಂತೆ ತನ್ನ ಮಗಳನ್ನು ಪೊಲೀಸರು ಬಲವಂತಗೊಳಿಸಿದ್ದರು ಎಂದು ಆರೋಪಿಸಿದ ಬಾಲಕಿಯ ತಾಯಿ, ಆರೋಪಿಗಳನ್ನು ರಕ್ಷಿಸಲು ತನ್ನ ಮಗಳನ್ನು ಕೊಲ್ಲಲು ಸರಕಾರವು ಷಡ್ಯಂತ್ರ ನಡೆಸಿತ್ತು. ಆಕೆ ತೀವ್ರ ಹಿಂಸೆ ಮತ್ತು ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಳು. ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿರದಿದ್ದರೆ ಸುದೀರ್ಘ ಕಾಲ ಚಿಕಿತ್ಸೆಯನ್ನೇಕೆ ನೀಡಲಾಗಿತ್ತು ಎಂದು ಪ್ರಶ್ನಿಸಿದರು.

ಪ್ರತಿಭಟನಾಕಾರರು ಕುಂಡುಲಿ ಮಾರುಕಟ್ಟೆಯವರೆಗೆ ಶವದೊಂದಿಗೆ ಜಾಥಾವನ್ನೂ ನಡೆಸಿದರು.

ಕಳೆದ ವರ್ಷದ ಅ.10ರಂದು ತಾನು ಮಸಾಗುಡಾ ಗ್ರಾಮದ ಮನೆಗೆ ಮರಳುತ್ತಿದ್ದಾಗ ಸಮವಸ್ತ್ರದಲ್ಲಿದ್ದ ನಾಲ್ವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ಪೊಲೀಸ್ ದೂರನ್ನು ದಾಖಲಿಸಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಮತ್ತು ವಿವಿಧ ಆಸ್ಪತ್ರೆಗಳ ವೈದ್ಯರು ನಡೆಸಿದ ತಪಾಸಣೆಗಳು ಇದನ್ನು ದೃಢಪಡಿಸಿವೆ ಎಂದು ಘಟನೆಯ ಒಂದು ತಿಂಗಳ ಬಳಿಕ ಪೊಲೀಸರು ಹೇಳಿದ್ದರು.

ಒಡಿಶಾದ ಡಿಜಿಪಿ ಆರ್.ಪಿ.ಶರ್ಮಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನಗೆ ಲಂಚ ನೀಡಲು ಪ್ರಯತ್ನಿಸಿದ್ದರು ಮತ್ತು ದೂರಿನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೆಸರಿಸದಂತೆ ಒತ್ತಾಯಿಸಿದ್ದರು ಎಂದು ಬಾಲಕಿ ಆರೋಪಿಸಿದ್ದಳು. ಶರ್ಮಾ ಈ ಆರೋಪವನ್ನು ನಿರಾಕರಿಸಿದ್ದರು. ಸ್ಥಳೀಯರನ್ನು ಆರೋಪಿಗಳನ್ನಾಗಿ ಹೆಸರಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಬಾಲಕಿ ಕಳೆದ ತಿಂಗಳು ಭುವನೇಶ್ವರದಲ್ಲಿ ಸಾಮಾಜಿಕ ಕಾರ್ಯಕರ್ತರು ನಡೆಸಿದ್ದ ಬಹಿರಂಗ ವಿಚಾರಣೆಯಲ್ಲಿ ತಿಳಿಸಿದ್ದಳು.

ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಅದು ಪ್ರಗತಿಯಲ್ಲಿದೆ. ಪ್ರತ್ಯೇಕ ಸಿಐಡಿ ತನಿಖೆಯೂ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News